ನವದೆಹಲಿ: ಬೆರಳಚ್ಚು ನವೀಕರಣ, ಹೆಸರು ಬದಲಾವಣೆ ಮೊದಲಾದ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಕೆಲವು ಸೇವೆಗಳ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಈ ಬಗ್ಗೆ ಮಾಹಿತಿ ನೀಡಿದ್ದು, ಅಕ್ಟೋಬರ್ 1ರಿಂದಲೇ ಹೊಸ ದರಗಳು ಜಾರಿಗೆ ಬಂದಿವೆ. ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕದಂತಹ ವಿವರಗಳನ್ನು ಬದಲಾವಣೆ ಮಾಡಲು ಶುಲ್ಕವನ್ನು 50 ರೂ.ನಿಂದ 75 ರೂ.ಗೆ ಏರಿಕೆ ಮಾಡಲಾಗಿದೆ.
ಬೆರಳಚ್ಚು, ಫೋಟೋದಂತಹ ಬಯೋಮೆಟ್ರಿಕ್ ವಿವರ ಬದಲಾಯಿಸುವ ಶುಲ್ಕವನ್ನು 100 ರೂ.ನಿಂದ 125 ರೂ.ಗೆ ಏರಿಕೆ ಮಾಡಲಾಗಿದೆ.
5ರಿಂದ 7 ವರ್ಷದ ಮಕ್ಕಳು ಮತ್ತು 15ರಿಂದ 17 ವರ್ಷದವರೆಗೆ ಬಯೋಮೆಟ್ರಿಕ್ ನವೀಕರಣಕ್ಕೆ ಶುಲ್ಕ ಕೈಬಿಡಲಾಗಿದೆ. ಈ ಹಿಂದೆ ಇದಕ್ಕೆ ರೂ.50 ಶುಲ್ಕವಿತ್ತು.
ಹೊಸ ಆಧಾರ್ ಕಾರ್ಡ್ ಪಡೆಯುವುದು ಉಚಿತವಾಗಿರುತ್ತದೆ. ಆಧಾರ್ ಕೇಂದ್ರಗಳಿಗೆ ಭೇಟಿ ನೀಡಲು ಆಗದವರಿಗೆ ಮನೆಯಲ್ಲೇ ನವೀಕರಣ ಮಾಡಿಕೊಳ್ಳಲು ಮೊಬೈಲ್ ಆ್ಯಪ್ ನೀಡಲಾಗಿದೆ. ಈ ಸೇವೆಯ ಶುಲ್ಕ 700 ರೂಪಾಯಿ ಆಗಿದೆ. ಇದಕ್ಕಾಗಿ ಇ- ಮೇಲ್ ಮೂಲಕ ಯುಐಡಿಎಐ ಸಂಪರ್ಕಿಸಿ ಅಪಾಯಿಂಟ್ಮೆಂಟ್ ಪಡೆಯಬೇಕಿದೆ.