ಮಂಗಳೂರು: ವಿಶ್ವ ಆರೋಗ್ಯ ಸಂಸ್ಥೆ ಅಡಕೆ ಕ್ಯಾನ್ಸರ್ ಕಾರಕ ಎಂದು ಹೇಳಿದ ಹಿನ್ನೆಲೆಯಲ್ಲಿ ಆತಂಕ ಎದುರಾಗಿದೆ. ಈ ಆತಂಕ ನಿವಾರಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಗೆ ತೆರಳುವ ಭಾರತದ ಪ್ರತಿನಿಧಿಗಳಿಗೆ ಅಡಕೆಯ ಔಷಧಿಯ ಗುಣಗಳ ಮಾಹಿತಿ ನೀಡುವ ಜೊತೆಗೆ ಅಡಕೆಯ ಅಧ್ಯಯನ ಹಾಗೂ ಕೃಷಿಕರ ಬದುಕಿನ ಮಾಹಿತಿ ನೀಡುವ ವ್ಯವಸ್ಥೆ ಬಗ್ಗೆ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳದಲ್ಲಿ ಮಂಗಳವಾರ ಸಭೆ ನಡೆಸಲಾಗಿದೆ. ಅಡಕೆ ಹಾನಿಕಾರಕವಲ್ಲ ಎನ್ನುವ ಅಂಶ ಈಗಾಗಲೇ ಅಧ್ಯಯನದಿಂದ ಹೊರಬಂದಿದೆ. ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ಜೆಡ್ಡು ಆಯುರ್ವೇದ ಸಂಸ್ಥೆ ಈ ಬಗ್ಗೆ ನಡೆಸಿರುವ ಅಧ್ಯಯನ ಅಂತರರಾಷ್ಟ್ರೀಯ ಜರ್ನಲ್ ನಲ್ಲೂ ಪ್ರಕಟವಾದ ಬಗ್ಗೆ ಸಭೆಯ ಗಮನಕ್ಕೆ ತರಲಾಗಿದೆ.
ವಿದೇಶಿ ಅಡಿಕೆ ಆಮದು ತಡೆಯಬೇಕು. ಅಡಕೆ ಗುಣಮಟ್ಟದ ಮಾಹಿತಿ ಅಗತ್ಯವಿದ್ದು, ಈಗಾಗಲೇ ಪ್ರತಿಷ್ಠಾನ 63ಕ್ಕೂ ಹೆಚ್ಚು ವಿದೇಶಿ ಅಡಕೆಯ ಸ್ಯಾಂಪಲ್ ಪರಿಶೀಲಿಸಿದೆ. ಸುಸಜ್ಜಿತ ಪ್ರಯೋಗಾಲಯ ಸ್ಥಾಪನೆ ಅಗತ್ಯವಿದೆ. ಅಡಿಕೆಯ ಇತರ ಬಳಕೆಯಾದ ಶಾಯಿ, ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನ ಸಭೆಯಲ್ಲಿ ಚರ್ಚೆ ನಡೆದಿದೆ.
ಅಡಕೆ ಹಳದಿ ರೋಗ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ಸರ್ಕಾರದಿಂದ ಕ್ರಮ ಕೈಗೊಳ್ಳಬೇಕು. ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಬೇಕು ಎನ್ನುವುದರ ಬಗ್ಗೆಯೂ ಚರ್ಚೆ ನಡೆದಿದೆ. ಅಡಕೆ ಕೊಳೆ ರೋಗದಿಂದ ಕೃಷಿಕರು ಸಂಕಷ್ಟ ಅನುಭವಿಸಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಪರಿಹಾರ ಕೊಡಿಸುವ ಬಗ್ಗೆ, ಅಡಿಕೆಯ ವಿವಿಧ ಔಷಧಿ ಗುಣದ ಬಗ್ಗೆ ಅಧ್ಯಯನ ನಡೆಸಲು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಟ್ರಸ್ಟಿಗಳಾದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಅಡಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಪ್ಕೋ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತುಮ್ ಕೋಸ್ ಅಧ್ಯಕ್ಷ ಹೆಚ್.ಎಸ್. ಶಿವಕುಮಾರ್, ಅಡಿಕೆ ಕೃಷಿ ಸಂಶೋಧಕ ಬದನಾಜೆ ಶಂಕರಭಟ್, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್, ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್. ಕೇಶವಭಟ್ ಮೊದಲಾದವರು ಇದ್ದರು.
