ರೈತರೇ ಗಮನಿಸಿ : `ಫ್ರೂಟ್ಸ್ ಡೇಟಾಬೆಸ್’ನಲ್ಲಿ ಜಮೀನಿನ ಸಂಪೂರ್ಣ ವಿಸ್ತೀರ್ಣ ನೋಂದಣಿಗೆ ಸೂಚನೆ

ಕೊಪ್ಪಳ:  ರೈತರು ಸಹ ಫ್ರೂಟ್ಸ್ ಡೇಟಾಬೇಸನಲ್ಲಿ ತಮ್ಮ ಸಂಪೂರ್ಣ ಜಮೀನಿನ ವಿಸ್ತೀರ್ಣದ ವಿವರವನ್ನು ಕೂಡಲೇ ದಾಖಲಿಸಬೇಕು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕೊಪ್ಪಳ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.

ನವೆಂಬರ್ 7ರಂದು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯವು ಈ ವರ್ಷ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ. ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ. ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಬೆಳೆ ಸಮೀಕ್ಷೆ ಅಗತ್ಯವಾಗಿದೆ. ಬೆಳೆ ಪರಿಹಾರವು ಆನ್‌ಲೈನ್ ಮೂಲಕವೇ ರೈತರಿಗೆ ತಲುಪಲಿದೆ. ಮಾಹಿತಿ ಬಿಟ್ಟುಹೋದರೆ  ಅಂತವರಿಗೆ ಪರಿಹಾರ ನೀಡಲು ಬರುವುದಿಲ್ಲ. ಹೀಗಾಗಿ ಶೇ.100 ರಷ್ಟು ಎಲ್ಲಾ ರೈತರ ಬೆಳೆ ಸಮೀಕ್ಷೆ ನಡೆಸಿ ಅವರಿಗೆ ನ್ಯಾಯಯುತ ಪರಿಹಾರ ತಲುಪಿಸುವ ಕಾರ್ಯ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಶೇ.98ರಷ್ಟು ರೈತರ ಅಕೌಂಟ್ ಸಿದ್ಧವಾಗಿದೆ. ಆದರೆ ಫ್ರೂಟ್ ಡೇಟಾಬೇಸನಲ್ಲಿ ರೈತರ ಜಮೀನಿನ ವಿಸ್ತೀರ್ಣವು ಶೇ.65ರಷ್ಟು ಮಾತ್ರ ದಾಖಲಾಗಿದೆ. ರೈತರಿಗೆ ಪರಿಹಾರ ಪಾವತಿ ಮಾಡಲು ರೈತರ ಜಮೀನಿನ ಸಂಪೂರ್ಣ ಮಾಹಿತಿ ಅಗತ್ಯವಿದೆ. ಆದ್ದರಿಂದ ಬಾಕಿ ಇರುವ ಶೇ.35ರಷ್ಟು ವಿಸ್ತೀರ್ಣವನ್ನು ಸೇರಿಸುವ ಕಾರ್ಯಕ್ಕೆ ಜಿಲ್ಲೆಯ ರೈತರು ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದರು.

ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದರು.  ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವು ಮಾಡಿಕೊಡಲಾಗಿತ್ತು. ಕಂದಾಯ ಗ್ರಾಮ ಘೋಷಿಸುವ ಕಾರ್ಯ ಕೊಪ್ಪಳ ಜಿಲ್ಲೆಯಲ್ಲಿ ಸಮರ್ಪಕವಾಗಿ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗು ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು  ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ಬಗರ್ ಹುಕುಂ ತಂತ್ರಾAಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಧಿಕಾರಿಗಳು ಆ್ಯಪ್ ಸಹಾಯದೊಂದಿಗೆ ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು ಎಂದು ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read