ಫರಿದಾಬಾದ್: ಸರನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜವಾಹರ್ ಕಾಲೋನಿಯಲ್ಲಿ 10 ವರ್ಷಗಳಿಂದ ಜೊತೆಯಾಗಿದ್ದ ಲಿವ್ ಇನ್ ಪಾರ್ಟ್ನರ್ ಕೊಂದು ಸೇಲ್ಸ್ ಮ್ಯಾನ್ ಪರಾರಿಯಾಗಿದ್ದಾನೆ.
ಮಹಿಳೆಯನ್ನು ಕೊಂದು ಮೃತದೇಹವನ್ನು ಹಾಸಿಗೆಯಲ್ಲಿ ಬಚ್ಚಿಟ್ಟಿದ್ದು, ನೆರೆಹೊರೆಯವರಿಗೆ ಶವದ ವಾಸನೆ ಬರಬಹುದೆಂದು ಹೆದರಿದ ಆರೋಪಿ ಮನೆಯ ವಿವಿಧ ಸ್ಥಳಗಳಲ್ಲಿ ಅಗರಬತ್ತಿ(ಧೂಪದ್ರವ್ಯ) ಹಚ್ಚುತ್ತಿದ್ದ.
ಕೃತ್ಯವೆಸಗಿದ ನಂತರ ಅವನು ತನ್ನ ಅಜ್ಜಿ ಸುಂದರಿ ದೇವಿಯ ಬಳಿಗೆ ಹೋಗಿ, ತನ್ನ ಸಂಗಾತಿ ಸೋನಿಯಾಳನ್ನು ಕೊಂದಿರುವುದಾಗಿ ಹೇಳಿದ್ದಾನೆ. ಸುಂದರಿ ದೇವಿ ಗಾಬರಿಗೊಂಡು ತಕ್ಷಣವೇ ಸರನ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಮನೆಗೆ ಬಂದಾಗ ಅವರ ಮನೆ ಲಾಕ್ ಆಗಿತ್ತು. ಮಾಲೀಕರ ಸಹಾಯದಿಂದ ಪೊಲೀಸರು ಮನೆಯ ಬೀಗ ಒಡೆದು ಮನೆಗೆ ಪ್ರವೇಶಿಸಿದಾಗ, ಬೆಡ್ ರೂಂನಲ್ಲಿ ದುರ್ವಾಸನೆಯನ್ನು ಗಮನಿಸಿದ್ದಾರೆ. ಪರಿಶೀಲಿಸಿದಾಗ ಸೋನಿಯಾಳ ಶವವನ್ನು ಹಾಸಿಗೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
ಹನ್ನೆರಡು ವರ್ಷಗಳ ಹಿಂದೆ ಜಿತೇಂದ್ರ ಪತ್ನಿ ಪೂನಂ ನಿಧನರಾದ ನಂತರ ಬದ್ಖಾಲ್ ಕಾಲೋನಿಯಲ್ಲಿ ವಾಸಿಸುತ್ತಿದ್ದ. ಬಟ್ಟೆ ಮಾರಾಟಗಾರ ಜಿತೇಂದ್ರ ಸೋನಿಯಾ ಅವರೊಂದಿಗೆ ಜೀವನ ನಡೆಸುತ್ತಿದ್ದ. ಪೂನಂ ಅವರ ಮರಣದ ನಂತರ ಅವರು ತಮ್ಮ ಇಬ್ಬರು ಮಕ್ಕಳೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡ. ಕಳೆದ ಹತ್ತು ವರ್ಷಗಳಿಂದ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಅವರ ಅಜ್ಜಿ ಹೇಳಿದ್ದಾರೆ.
ಶನಿವಾರ ರಾತ್ರಿ ಜಿತೇಂದ್ರ ತಮ್ಮ ಅಜ್ಜಿಯ ಬಳಿಗೆ ಬಂದು, ನಾನು ಸೋನಿಯಾಳನ್ನು ಕೊಂದಿದ್ದೇನೆ ಎಂದು ಹೇಳಿ ಪೊಲೀಸ್ ಠಾಣೆಗೆ ಶರಣಾಗಲು ಹೋಗುವುದಾಗಿ ಹೇಳಿದ್ದಾನೆ. ಆದರೆ ಪೊಲೀಸ್ ಠಾಣೆಗೆ ಹೋಗದೇ ತಲೆಮರೆಸಿಕೊಂಡಿದ್ದಾನೆ. ಸುಂದರಿ ದೇವಿ ಸ್ವತಃ ಪೊಲೀಸರ ಬಳಿಗೆ ಹೋಗಿ ಮಾಹಿತಿ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಸುಂದರಿ ದೇವಿ ಜೊತೆಗೆ ಜಿತೇಂದ್ರ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಬಂದು ಬೀಗ ಮುರಿದ ನಂತರ ಕೊಳೆತ ಸ್ಥಿತಿಯಲ್ಲಿದ್ದ ಸೋನಿಯಾ ಮೃತದೇಹ ಕಂಡು ಬಂದಿದೆ.
ಜಿತೇಂದ್ರನರನ್ನು ಗುರುತಿಸಿ ಬಂಧಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತನಿಖಾಧಿಕಾರಿ ಸುಂದರ್ ಸಿಂಗ್ ಹೇಳಿದ್ದಾರೆ. ಮುಂಬೈನಲ್ಲಿ ಹೋಟೆಲ್ ನಿರ್ವಹಣೆ ಅಧ್ಯಯನ ಮಾಡುತ್ತಿರುವ ಸೋನಿಯಾ ಅವರ ಮಗ ಹರ್ಷ್ ಅವರಿಗೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.