ʼಬಿಗ್‌ ಬಿʼ ಮೇಲಿನ ಅಭಿಮಾನಕ್ಕೆ ಆಸ್ತಿಯನ್ನು ಅವರಿಗೇ ಮಾರಾಟ ಮಾಡಿದ ಅಭಿಮಾನಿ !

ಭಾರತೀಯ ಚಿತ್ರರಂಗದ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಇರುವ ಅಭಿಮಾನಿ ಬಳಗ ವಿಶ್ವಾದ್ಯಂತ ವ್ಯಾಪಿಸಿದೆ. ಪ್ರತಿ ಭಾನುವಾರ ಅವರ ‘ಜಲ್ಸಾ’ ನಿವಾಸದ ಹೊರಗೆ ನೆರೆಯುವ ಜನಸಾಗರವೇ ಇದಕ್ಕೆ ಸಾಕ್ಷಿ. ಇದೀಗ, ಅಂಥದ್ದೇ ಅಪ್ಪಟ ಅಭಿಮಾನಿಯೊಬ್ಬರು, ಬಚ್ಚನ್ ಮೇಲಿನ ಪ್ರೀತಿಗೆ ತಮ್ಮ 50 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಅವರಿಗೇ ಮಾರಾಟ ಮಾಡಿ ಸುದ್ದಿಯಾಗಿದ್ದಾರೆ. ನಾವು ಮಾತನಾಡುತ್ತಿರುವುದು ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ನಿರ್ಮಾಪಕ ಆನಂದ್ ಪಂಡಿತ್ ಬಗ್ಗೆ.

‘ತ್ರಿಶೂಲ್’ ಚಿತ್ರದ ಸ್ಫೂರ್ತಿ, ಮುಂಬೈಗೆ ಪಯಣ

ಆನಂದ್ ಪಂಡಿತ್ ಮೂಲತಃ ಅಹಮದಾಬಾದ್‌ನವರು. 1978ರಲ್ಲಿ ತೆರೆಕಂಡ ಅಮಿತಾಭ್ ಬಚ್ಚನ್ ಅಭಿನಯದ ‘ತ್ರಿಶೂಲ್’ ಚಿತ್ರವು ಅವರ ಜೀವನವನ್ನೇ ಬದಲಾಯಿಸಿತು. ಚಿತ್ರದಲ್ಲಿನ ಅಮಿತಾಭ್ ಅವರ ‘ವಿಜಯ್’ ಪಾತ್ರದಿಂದ ತೀವ್ರವಾಗಿ ಪ್ರೇರಿತರಾದ ಪಂಡಿತ್, ತಾವೂ ‘ಶಾಂತಿ ಕನ್‌ಸ್ಟ್ರಕ್ಷನ್ಸ್’ ನಂತಹ ಕಂಪನಿ ಆರಂಭಿಸುವ ಕನಸು ಕಂಡರು. ಈ ಕನಸನ್ನು ನನಸಾಗಿಸಲು ಅಹಮದಾಬಾದ್ ತೊರೆದು ಮುಂಬೈಗೆ ಬಂದು ನೆಲೆಸಿದರು. “ನಾನು ಬಚ್ಚನ್ ಸಾಹೇಬ್‌ ಚಿತ್ರಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ‘ತ್ರಿಶೂಲ್’ ನನ್ನಲ್ಲಿ ನಿಜವಾದ ಸ್ಫೂರ್ತಿ ತುಂಬಿತು. ಇಂದು ನಾನು ‘ಲೋಟಸ್ ಡೆವಲಪರ್ಸ್’ ಅನ್ನು ಸ್ಥಾಪಿಸಿದ್ದೇನೆಂದರೆ ಅದಕ್ಕೆ ಬಚ್ಚನ್ ಸಾಹೇಬರೇ ಕಾರಣ” ಎಂದು ಆನಂದ್ ಪಂಡಿತ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಬಿಗ್ ಬಿಗೆ ನೆರೆಹೊರೆಯವರು, ಕೊನೆಗೆ ಆಸ್ತಿ ಮಾರಾಟ !

ಆನಂದ್ ಪಂಡಿತ್ ಅವರ ಕನಸುಗಳು ಕೇವಲ ವೃತ್ತಿಜೀವನದಲ್ಲಿ ಮಾತ್ರ ನನಸಾಗಲಿಲ್ಲ, ವೈಯಕ್ತಿಕ ಜೀವನದಲ್ಲೂ ಅಚ್ಚರಿಯ ತಿರುವು ಪಡೆದವು. ಮುಂಬೈಗೆ ಬಂದ ನಂತರ, ಅವರು ಅಮಿತಾಭ್ ಬಚ್ಚನ್ ಅವರ ನೆರೆಹೊರೆಯವರಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. 2010ರಲ್ಲಿ ಹೂಡಿಕೆಯ ಉದ್ದೇಶದಿಂದ ‘ಜಲ್ಸಾ’ ನಿವಾಸದ ಹಿಂಭಾಗದಲ್ಲಿದ್ದ ಒಂದು ಬಂಗಲೆಯನ್ನು ಖರೀದಿಸಿದ್ದರು.

“ನಾನು ಅವರಿಗೆ ತುಂಬಾ ಹತ್ತಿರದಿಂದ ಪರಿಚಿತನಾಗಿದ್ದು ನನ್ನ ಸೌಭಾಗ್ಯ. ಅವರು ನನ್ನನ್ನು ತಮ್ಮ ಕುಟುಂಬದಂತೆ ನೋಡಿಕೊಳ್ಳುತ್ತಾರೆ. ನನಗೆ ಅಗತ್ಯವಿದ್ದಾಗಲೆಲ್ಲಾ ಅವರು ನನ್ನ ಬೆಂಬಲಕ್ಕೆ ನಿಲ್ಲುತ್ತಾರೆ,” ಎಂದು ಪಂಡಿತ್ ಹೇಳಿದ್ದಾರೆ. 2013ರಲ್ಲಿ ಅಮಿತಾಭ್ ಬಚ್ಚನ್ ತಮ್ಮ ‘ಜಲ್ಸಾ’ ನಿವಾಸವನ್ನು ವಿಸ್ತರಿಸಲು ಬಯಸಿದರು. ಆಗ, ಪಂಡಿತ್ ಅವರ ಬಂಗಲೆಯನ್ನು ಖರೀದಿಸಲು ವಿನಂತಿಸಿದರು. ಅಭಿಮಾನಿಯಾಗಿ, ಆನಂದ್ ಪಂಡಿತ್ ತಮ್ಮ ₹50 ಕೋಟಿ ಮೌಲ್ಯದ ಆ ಬಂಗಲೆಯನ್ನು ʼಬಿಗ್ ಬಿʼ ಗೇ ಮಾರಾಟ ಮಾಡಿದರು.

ಇಂದಿಗೂ ಆನಂದ್ ಪಂಡಿತ್ ಅಮಿತಾಭ್ ಬಚ್ಚನ್ ಅವರ ನೆರೆಹೊರೆಯವರಾಗಿದ್ದು, ‘ಜಲ್ಸಾ’ದಿಂದ ಕೇವಲ 50 ಮೀಟರ್ ದೂರದಲ್ಲಿರುವ ‘ಜಾನಕಿ ಕುಟೀರ್’ ಸಂಕೀರ್ಣದಲ್ಲಿ ವಾಸಿಸುತ್ತಿದ್ದಾರೆ. ಒಬ್ಬ ಅಭಿಮಾನಿಯ ಅಚಲ ಪ್ರೀತಿ ಮತ್ತು ಅವರ ಆದರ್ಶವನ್ನು ಅನುಸರಿಸಿದ ಪರಿ ಇದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read