ಬೆಂಗಳೂರು: ಬೆಂಗಳೂರು ನಗರದ ಪ್ರಸಿದ್ಧ ಐತಿಹಾಸಿಕ ಗಾಳಿ ಆಂಜನೇಯ ದೇವಾಲಯವನ್ನು ರಾಜ್ಯ ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ.
ಗಾಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಳ್ಳಲಾಗಿದೆ. 5 ವರ್ಷದ ನಂತರ ದೇವಸ್ಥಾನದ ಆಡಳಿತ ಮಂಡಳಿ ಸುಪರ್ದಿಗೆ ವಹಿಸಲಾಗುವುದು. ಈ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗುವವರು ಹೋಗಬಹುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮೈಸೂರು ರಸ್ತೆಯ ಐತಿಹಾಸಿಕ ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆಯ ವೇಳೆ ಅಕ್ರಮ ನಡೆದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಲ್ಲದೆ ದೇವಾಲಯದಲ್ಲಿ ಆಡಳಿತ ನಿರ್ವಹಣೆ ಸರಿ ಇಲ್ಲ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ನೀಡುವಂತೆ ಸರ್ಕಾರ ಮುಜರಾಯಿ ಇಲಾಖೆಗೆ ಸೂಚನೆ ನೀಡಿತ್ತು. ಇದೀಗ ವರದಿ ಆಧಾರದಲ್ಲಿ ದೇವಾಲಯವನ್ನು ಮುಜರಾಯಿ ಇಲಾಖೆ ವಶಕ್ಕೆ ನೀಡಲಾಗಿದೆ ಎಂದು ಹೇಳಿದ್ದಾರೆ.
ದೇವಾಲಯವನ್ನು ಸರ್ಕಾರದ ವಶಕ್ಕೆ ಪಡೆದ ಕ್ರಮವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲು ದೇವಾಲಯದ ಆಡಳಿತ ಮಂಡಳಿ ಸದಸ್ಯರು ತೀರ್ಮಾನಿಸಿದ್ದಾರೆ.