ಉಡುಪಿ : ಆಘಾತಕಾರಿ ಘಟನೆಯೊಂದರಲ್ಲಿ, ‘ಕಾಂತಾರ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ನಟ ಮತ್ತು ರಂಗಭೂಮಿ ಕಲಾವಿದ ಟಿ ಪ್ರಭಾಕರ್ ಕಲ್ಯಾಣಿ ಹೃದಯಾಘಾತದಿಂದ ಹಿರಿಯಡ್ಕದಲ್ಲಿರುವ ತಮ್ಮ ನಿವಾಸದಲ್ಲಿ ಕುಸಿದು ಬಿದ್ದು ನಿಧನರಾದರು.
ಪೆರ್ಡೂರಿನ ಮೂಲದವರು ಮತ್ತು ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಅಧಿಕಾರಿಯಾಗಿದ್ದ ಪ್ರಭಾಕರ್, ‘ಕಾಂತಾರ’ದಲ್ಲಿ ವಕೀಲರ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾಗಿದ್ದರು.
ಕುಟುಂಬದ ಮೂಲಗಳ ಪ್ರಕಾರ, ಅವರು ಎರಡು ದಿನಗಳ ಹಿಂದೆ ಮನೆಯಲ್ಲಿ ಕುಸಿದುಬಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಪ್ರಭಾಕರ್, ವಿವಿಧ ರಂಗ ನಾಟಕಗಳಲ್ಲಿ ಸಕ್ರಿಯವಾಗಿ ಅಭಿನಯಿಸಿದ್ದರು. ಅವರ ಅಂತಿಮ ವಿಧಿವಿಧಾನಗಳನ್ನು ಶುಕ್ರವಾರ ಬೀಡಿನಗುಡ್ಡೆ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿದೆ.