ನವದೆಹಲಿ: ಗಾಜಿಯಾಬಾದ್‌ನಲ್ಲಿ ಬಾಡಿಗೆ ಮನೆಯಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ(STF) ಬಂಧಿಸಿದೆ.
ಆರೋಪಿ ಹರ್ಷವರ್ಧನ್ ಜೈನ್, “ವೆಸ್ಟ್ ಆರ್ಕ್ಟಿಕಾ” ಎಂಬ ನಕಲಿ ದೇಶದ ರಾಜತಾಂತ್ರಿಕನಂತೆ ನಟಿಸುತ್ತಿದ್ದ. ನಕಲಿ ಅಂಚೆಚೀಟಿಗಳು, ಕರೆನ್ಸಿ, ರಾಜತಾಂತ್ರಿಕ ಪರವಾನಗಿ ಫಲಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಗಾಜಿಯಾಬಾದ್‌ನ ಕವಿ ನಗರದ ನಿವಾಸಿ ಜೈನ್ ಮಂಗಳವಾರ ಸಿಕ್ಕಿಬಿದ್ದಿದ್ದಾನೆ. STF ನ ನೋಯ್ಡಾ ಘಟಕದ ಪ್ರಾಥಮಿಕ ತನಿಖೆಯ ಪ್ರಕಾರ, ಅವರು ವಿದೇಶಗಳಲ್ಲಿ ಉದ್ಯೋಗ ನಿಯೋಜನೆಗಳ ಭರವಸೆ ನೀಡುವ ಮೂಲಕ ಜನರು ಮತ್ತು ಕಂಪನಿಗಳನ್ನು ವಂಚಿಸುತ್ತಿದ್ದ. ನಕಲಿ ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆಯಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸಲಾಗಿದೆ.
ತನ್ನನ್ನು ನಿಜವಾದವನೆಂದು ತೋರಿಸಿಕೊಳ್ಳಲು, ಜೈನ್ ಪ್ರಧಾನಿ ಮತ್ತು ರಾಷ್ಟ್ರಪತಿಗಳಂತಹ ಉನ್ನತ ನಾಯಕರೊಂದಿಗೆ ಎಡಿಟ್ ಫೋಟೋಗಳನ್ನು ಬಳಸಿಕೊಂಡಿದ್ದ. ಆರೋಪಿಯು ಬಾಡಿಗೆ ಮನೆಯಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ. ಪಶ್ಚಿಮ ಆರ್ಕ್ಟಿಕಾ, ಸಬೋರ್ಗಾ, ಪೌಲ್ವಿಯಾ ಮತ್ತು ಲೊಡೋನಿಯಾದಂತಹ ಅಸ್ತಿತ್ವದಲ್ಲಿಲ್ಲದ ದೇಶಗಳ ಕಾನ್ಸುಲ್ ಅಥವಾ ರಾಯಭಾರಿ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದ್ದ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮಿತಾಭ್ ಯಶ್ ಹೇಳಿದ್ದಾರೆ.
ಹೆಚ್ಚು ಅಧಿಕೃತವಾಗಿ ಕಾಣುವಂತೆ ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ಕಾರು ಗಳನ್ನು ಜೈನ್ ಬಳಸಿದ್ದಾನೆ. ವಿಚಾರಣೆಯ ಸಮಯದಲ್ಲಿ ಆತ ವಿವಾದಾತ್ಮಕ ದೇವಮಾನವ ಚಂದ್ರಸ್ವಾಮಿ ಮತ್ತು ಅಂತರರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಅವರೊಂದಿಗೆ ಈ ಹಿಂದೆ ಸಂಪರ್ಕ ಹೊಂದಿದ್ದನೆಂದು ತಿಳಿದುಬಂದಿದೆ. ಅಕ್ರಮವಾಗಿ ಉಪಗ್ರಹ ಫೋನ್ ಹೊಂದಿದ್ದಕ್ಕಾಗಿ 2011 ರಲ್ಲಿ ಆತನ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ನಕಲಿ ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ನಾಲ್ಕು ವಾಹನಗಳು, ನಕಲಿ ಮೈಕ್ರೋನೇಷನ್ ಗಳಿದ್ದ 12 ನಕಲಿ ರಾಜತಾಂತ್ರಿಕ ಪಾಸ್ ಪೋರ್ಟ್‌ಗಳು, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುದ್ರೆಯೊಂದಿಗೆ ನಕಲಿ ದಾಖಲೆಗಳು, ಎರಡು ನಕಲಿ ಪ್ಯಾನ್ ಕಾರ್ಡ್‌ಗಳು, ವಿವಿಧ ದೇಶಗಳು ಮತ್ತು ಸಂಸ್ಥೆಗಳ 34 ರಬ್ಬರ್ ಸ್ಟ್ಯಾಂಪ್‌ಗಳು, ಎರಡು ನಕಲಿ ಪ್ರೆಸ್ ಕಾರ್ಡ್‌ಗಳು, 44.7 ಲಕ್ಷ ರೂ. ನಗದು, ವಿದೇಶಿ ಕರೆನ್ಸಿ, ಶೆಲ್ ಕಂಪನಿಗಳಿಗೆ ಸಂಬಂಧಿಸಿದ ಪೇಪರ್‌ಗಳು, 18 ನಕಲಿ ರಾಜತಾಂತ್ರಿಕ ಪ್ಲೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕವಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.