ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಪೊಲೀಸ್ ಇಲಾಖೆಗೆ ಸೇರಿದ್ದ ವ್ಯಕ್ತಿಗೆ 7 ವರ್ಷ ಜೈಲು ಶಿಕ್ಷೆ

ಹಾವೇರಿ: ನಕಲಿ ದಾಖಲಾತಿ ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದ ವ್ಯಕ್ತಿಗೆ ಹಾವೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆ,  30,000 ರೂ. ದಂಡ ವಿಧಿಸಿದೆ.

ಸೋಮಶೇಖರ ಭೀಮಪ್ಪ ಕುಂಕುಮಗಾರ ಎಂಬುವನಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗಿದೆ. ಹಿರೇಕೆರೂರು ತಾಲೂಕು ಭೋಗಾವಿ ಗ್ರಾಮದ ಸೋಮಶೇಖರಪ್ಪ ಮೂಲತಃ ಕುಂಕುಮಗಾರ(ಬಲಿಜ ಜನಾಂಗ) ಜಾತಿಗೆ ಸೇರಿದ್ದರೂ ಚನ್ನದಾಸರ ಜಾತಿಗೆ ಸೇರಿರುವುದಾಗಿ ಶಾಲಾ ದಾಖಲಾತಿಯಲ್ಲಿ ತಿದ್ದುಪಡಿ ಮಾಡಿಸಿ ಸುಳ್ಳು ವ್ಯಾಸಂಗ ಪ್ರಮಾಣ ಪತ್ರ ಮತ್ತು ಹಿರೇಕೆರೂರು ತಹಶೀಲ್ದಾರ್ ಕಚೇರಿಯಿಂದ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಪಡೆದುಕೊಂಡು ಪೊಲೀಸ್ ಇಲಾಖೆಗೆ ಸೇರಿದ್ದ.

ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರ ತನಿಖೆಯಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಿರೇಕೆರೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾವಣಗೆರೆ ನಾಗರಿಕ ಹಕ್ಕು ಜಾರಿ ನಿರ್ದೇಶಕರು ಸಬ್ ಇನ್ಸ್ಪೆಕ್ಟರ್ ಜಯರತ್ನಮ್ಮ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಒಂದನೇ ಆರೋಪಿಯಾಗಿರುವ ಭೋಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹನುಮಂತಪ್ಪ ತಳವಾರ ಮೃತಪಟ್ಟಿದ್ದಾರೆ. ಹಾವೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್. ಲಕ್ಷ್ಮೀನಾರಾಯಣ ಅವರು ವಿಚಾರಣೆ ನಡೆಸಿ, 7 ವರ್ಷ ಕಾರಾಗೃಹ ಶಿಕ್ಷೆ, 30 ಸಾವಿರ  ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ. ಕೂಡಲಗಿಮಠ ವಾದ ಮಂಡಿಸಿದ್ದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read