ಮುಂಬೈ: ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಐವರಿಗೆ ಗಂಭೀರ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಘಟನೆ ನವಿಮುಂಬೈನಲ್ಲಿ ನಡೆದಿದೆ.
ನವಿಮುಂಬೈನ ವಶಿ ಎಂಬಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಐವರು 2024ರ ಡಿಸೆಂಬರ್ ನಿಂದ 2025ರ ಮಾರ್ಚ್ ಅವಧಿಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 65ವರ್ಷ ಮೇಲ್ಪಟ್ಟ ಇಬ್ಬರು ಸೇರಿ ಒಟ್ಟು ಐವರು ತೀವ್ರವಾದ ಕಣ್ಣಿನ ಸೋಂಕಿನಿಂದ ಬಳಲುವಂತಾಗಿದೆ. ಕಣ್ಣಿನ ಶಸ್ತ್ರಚಿಕಿತ್ಸೆ ಬಳಿಕ ಐವರಿಗೂ ಸುಡೊಮೊನಾಸ್ ಎಂಬ ವೈರಾಣು ಸೋಂಕು ತಗುಲಿದೆ. ಈ ಬಗ್ಗೆ ವಶಿ ಠಾಣೆಯಲ್ಲಿ ದೂರು ದಾಖಲಾಗಿದೆ.
ವೈದ್ಯರ ದುಡುಕಿನ ನಿರ್ಧಾರ, ನಿರ್ಲಕ್ಶ್ಯ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಆರೋಪದಡಿ ಇಬ್ಬರು ವೈದ್ಯರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವೈದ್ಯರಿಬ್ಬರೂ ತಮ್ಮ ಪರವಾನಿಗಿಯನ್ನು ಮಹಾರಾಷ್ಟ್ರದ ವೈದ್ಯಕೀಯ ಮಂಡಳಿಯಿಂದ ನವೀಕರಿಸಿರಲಿಲ. ಈ ಬಗ್ಗೆ ಸೋಂಕಿತರು ದೂರು ನೀಡಿದ್ದರು. ಸಿವಿಲ್ ಶಸ್ತ್ರಚಿಕಿತ್ಸಕರು ತನಿಖೆ ನಡೆಸಿ ವರದಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರು ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.