ಭಾರತದಲ್ಲಿ ಇತ್ತೀಚೆಗೆ ನಡೆದ ಒಂದು ಅಮಾನವೀಯ ಘಟನೆಯು ಆತಂಕಕಾರಿ ಮುಖವನ್ನು ಅನಾವರಣಗೊಳಿಸಿದೆ. ತನ್ನ ಒಂಬತ್ತು ತಿಂಗಳ ಮಗುವಿನೊಂದಿಗೆ ಹೋಗುತ್ತಿದ್ದ ಮಹಿಳೆಯೊಬ್ಬರು, ಸ್ಥಳೀಯ ಭಾಷೆ ಮರಾಠಿ ಬದಲು ಇಂಗ್ಲಿಷ್‌ನಲ್ಲಿ ಕೇವಲ “ಎಕ್ಸ್‌ಕ್ಯೂಸ್ ಮಿ” (ಕ್ಷಮಿಸಿ) ಎಂದು ಹೇಳಿದ್ದಕ್ಕಾಗಿ ಗುಂಪಿನಿಂದ ಹಲ್ಲೆಗೊಳಗಾಗಿದ್ದಾರೆ. ಸೌಜನ್ಯದ ಅಭಿವ್ಯಕ್ತಿಯಾದ “ಕ್ಷಮಿಸಿ” ಎಂಬ ಪದವು ಹಿಂಸಾಚಾರಕ್ಕೆ ಕಾರಣವಾಗಿರುವುದು ನಿಜಕ್ಕೂ ಆಘಾತಕಾರಿ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ.
ಸಾಮಾನ್ಯವಾಗಿ, ಅಪಾರ್ಟ್‌ಮೆಂಟ್ ಕಟ್ಟಡದ ದಾರಿಯಲ್ಲಿ ಅಡ್ಡಲಾಗಿ ನಿಂತಿದ್ದ ವ್ಯಕ್ತಿಗೆ “ಕ್ಷಮಿಸಿ” ಎಂದು ಹೇಳುವುದು ಒಂದು ಸೌಜನ್ಯದ ನಡವಳಿಕೆ. ಆದರೆ ಈ ಮಹಿಳೆಯರು ಕೇವಲ ಈ ಎರಡು ಪದಗಳನ್ನು ಬಳಸಿದ್ದಕ್ಕಾಗಿ ಒಂದು ದೊಡ್ಡ ಗುಂಪಿನಿಂದ ದೈಹಿಕವಾಗಿ ಹಲ್ಲೆಗೊಳಗಾಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ.
ಅತ್ಯಂತ ದುರಂತದ ಸಂಗತಿಯೆಂದರೆ, ಈ ಪುಂಡರು ತಮ್ಮ ಕ್ರೌರ್ಯದ ನಡುವೆ ಸಿಲುಕಿಕೊಂಡಿದ್ದ ಆ ಒಂಬತ್ತು ತಿಂಗಳ ಮಗುವಿನ ಬಗ್ಗೆಯೂ ಯಾವುದೇ ಮಾನವೀಯ ಕಾಳಜಿ ತೋರಲಿಲ್ಲ. ಈ ಘಟನೆ ಭಾರತದ ವಾಣಿಜ್ಯ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಮುಂಬೈನಲ್ಲಿ ನಡೆದಿದೆ ಎಂದು ಹೇಳಲಾಗಿದೆ.