ಹಾಸನ : ಐತಿಹಾಸಿಕ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ನಿನ್ನೆಯಿಂದ ಓಪನ್ ಆಗಿದ್ದು, ಇಂದಿನಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೊದಲ ದಿನವೇ ದರ್ಶನಕ್ಕೆ ಭಕ್ತರ ದಂಡೇ ಹರಿದು ಬಂದಿದೆ .ಇಂದು ಬೆಳಗ್ಗೆ 6 ಗಂಟೆಯಿಂದ ದರ್ಶನ ಆರಂಭವಾಗಿದ್ದು, ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ.
ಆಶ್ವೀಜ ಮಾಸದ ಮೊದಲ ಗುರುವಾರ (ನಿನ್ನೆ) ಅರಸು ವಂಶಸ್ಥರು ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಾಗಿದೆ.ವರ್ಷದ ಹಿಂದೆ ಹಚ್ಚಿಟ್ಟದ್ದ ದೀಪ ಇನ್ನು ಉರಿಯುತ್ತಿತ್ತು, ಹಾಗೂ ಅಲಂಕರಿಸಿದ ಹೂಗಳು ಕೂಡ ಬಾಡದೇ ಹಾಳಾಗಿರಲಿಲ್ಲ, ಈ ಪವಾಡ ಕಂಡು ಜನರು ಪಾವನರಾಗಿದ್ದಾರೆ.
ಇಂದು ಮುಂಜಾನೆಯೇ ಭಕ್ತರು ಹಾಸನಾಂಬೆಯ ದರ್ಶನ ಪಡೆಯಲು ಆಗಮಿಸಿದ್ದಾರೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ.
ಕೃಷ್ಣಪ್ಪ ನಾಯಕನ ಕಾಲದಿಂದಲೂ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯಲ್ಪಡುತ್ತದೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಾದಿಗಳು ಅಂದು ದರ್ಶನಾಕಾಂಕ್ಷಿಗಳಾಗಿ ಬಂದು ದೇವಿಯ ದರ್ಶನ ಪಡೆಯುತ್ತಾರೆ.
ಹೀಗೆ ವರ್ಷಕ್ಕೊಮ್ಮೆ ದೇಗುಲದ ಬಾಗಿಲ ಪುರ ಪ್ರಮುಖರಾದ ತಹಸಿಲ್ದಾರರು/ ಕಮೀಷನರ್ ಶಾಸಕರು ಮುಂತಾದವರ ಸಮ್ಮುಖದಲ್ಲಿ ತೆರೆಯಲಾಗುತ್ತದೆಯಲ್ಲದೇ, ಬಲಿಪಾಡ್ಯಮಿಯ ಮಾರನೇ ದಿನ ಬಾಗಿಲು ಅವರೆಲ್ಲರ ಸಮ್ಮುಖದಲ್ಲಿ ದೇವಿಗೆ ದೀಪ, ಅಕ್ಕಿ ನೈವಿದ್ಯಾದಿ ಅಲಂಕಾರಗಳು ಇರುವಂತೆಯೇ ಮುಚ್ಚಲಾಗುತ್ತದೆ.
ಮಧ್ಯಾಹ್ನ 12 ಗಂಟೆಗೆ ಶ್ರೀ ಹಾಸನಾಂಬ ದೇವಿಯ ದೇವಾಲಯದ ಬಾಗಿಲನ್ನು ತೆರೆಯಲಾಗಿದ್ದು,. ಅ.23 ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಭಕ್ತರಿಗೆ ಅ.10 ರಿಂದ ಅ.23 ರವರೆಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಅ.10 ರಿಂದ ಅ.17 ರವರೆಗೆ ಬೆ.10 ರಿಂದ ಮ.01 ಗಂಟೆಯವರೆಗೆ ಮಾತ್ರ ಶಿಷ್ಟಾಚಾರ ದರ್ಶನಕ್ಕೆ ಅವಕಾಶವಿರುತ್ತದೆ. ಅ.18 ರಿಂದ ಅ.22 ರವರೆಗೆ ಯಾವುದೇ ರೀತಿಯ ಶಿಷ್ಟಾಚಾರ ದರ್ಶನಕ್ಕೆ ಅವಕಾಶ ಇರುವುದಿಲ್ಲ.