ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ) 2024-25ನೇ ಹಣಕಾಸು ವರ್ಷದ ಶೇ. 8.25 ಬಡ್ಡಿದರವನ್ನು ತನ್ನ ಸದಸ್ಯರ ಸುಮಾರು ಶೇ. 97 ರಷ್ಟು ಖಾತೆಗಳಿಗೆ ಜಮಾ ಮಾಡಿದೆ.
ಈ ಪ್ರಕ್ರಿಯೆಯನ್ನು ಈಗ ವೇಗವಾಗಿಸಲಾಗಿದೆ, ಇದರಿಂದಾಗಿ ಜೂನ್ನಲ್ಲಿಯೇ ಸಂಪೂರ್ಣ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ, ಸದಸ್ಯರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯು ಆಗಸ್ಟ್ ತಿಂಗಳಲ್ಲಿ ಪ್ರಾರಂಭವಾಯಿತು ಮತ್ತು ಡಿಸೆಂಬರ್ನಲ್ಲಿ ಪೂರ್ಣಗೊಂಡಿತು. ಇದನ್ನು ಪರಿಗಣಿಸಿ, ನಿಗದಿತ ಸಮಯಕ್ಕಿಂತ ಎರಡು ಮೂರು ತಿಂಗಳು ಮುಂಚಿತವಾಗಿ ಜಮಾ ಮಾಡಲಾಗಿದೆ.
ಈ ಹಿಂದೆ, ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್ಒ ಏಪ್ರಿಲ್ 2025 ರಲ್ಲಿ ನಿವ್ವಳ ಆಧಾರದ ಮೇಲೆ 19.14 ಲಕ್ಷ ಸದಸ್ಯರನ್ನು ಸೇರಿಸಿದೆ ಎಂದು ಕಾರ್ಮಿಕ ಸಚಿವಾಲಯ ಬಿಡುಗಡೆ ಮಾಡಿದ ವೇತನದಾರರ ದತ್ತಾಂಶ ತಿಳಿಸಿದೆ.
ಈ ಅಂಕಿ ಅಂಶವು ಮಾರ್ಚ್ 2025 ಕ್ಕೆ ಹೋಲಿಸಿದರೆ ಶೇ. 31.31 ರಷ್ಟು ಮತ್ತು ಏಪ್ರಿಲ್ 2024 ಕ್ಕೆ ಹೋಲಿಸಿದರೆ ಶೇ. 1.17 ರಷ್ಟು ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.