
ಬೆಂಗಳೂರು: ನಟ ಸುದೀಪ್ ಮತ್ತು ನಿರ್ಮಾಪಕ ಎಂ.ಎನ್. ಕುಮಾರ್ ಅವರ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ನಿರ್ಮಾಪಕ ಎಂ.ಎನ್. ಕುಮಾರ್ ಧರಣಿ ಹಿಂಪಡೆದುಕೊಂಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆರೋಪ -ಪ್ರತ್ಯಾರೋಪ ಕೇಳಿ ಬಂದಿದ್ದು, ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದರು. ನಿರ್ಮಾಪಕ ಕುಮಾರ್ ಫಿಲ್ಮ್ ಚೇಂಬರ್ ಎದುರು ಧರಣಿ ನಡೆಸಿದ್ದರು. ಮಂಗಳವಾರ ರವಿಚಂದ್ರನ್ ಅವರು ನಿರ್ಮಾಪಕ ಕುಮಾರ್ ಸೇರಿದಂತೆ ಹಲವರನ್ನು ಭೇಟಿಯಾಗಿದ್ದರು.
ಬುಧವಾರ ಶಿವರಾಜ್ ಕುಮಾರ್ ಮತ್ತು ರವಿಚಂದ್ರನ್ ಅವರನ್ನು ಭೇಟಿಯಾದ ಕುಮಾರ್ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ. ಶಿವಣ್ಣ ಮತ್ತು ರವಿ ಸರ್ ಅವರ ಮಾತಿಗೆ ಗೌರವ ಕೊಟ್ಟು ಧರಣಿಯನ್ನು ತಾತ್ಕಾಲಿಕವಾಗಿ ವಾಪಸ್ ಪಡೆಯುತ್ತಿದ್ದೇವೆ. ಮುಂದೆ ಅವರ ಮಾರ್ಗದರ್ಶನದಲ್ಲಿ ನಡೆಯುವುದಾಗಿ ಎಂ.ಎನ್. ಕುಮಾರ್ ಹೇಳಿದ್ದಾರೆ. ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಿ ಮತ್ತೊಬ್ಬರಿಗೆ ನೋವು ಉಂಟು ಮಾಡುವ ಉದ್ದೇಶವಿಲ್ಲವೆಂದು ಅವರು ತಿಳಿಸಿದ್ದಾರೆ.
ನಿರ್ಮಾಪಕ ಕುಮಾರ್ ಅವರೊಂದಿಗೆ ಮಾತನಾಡಿದ್ದು, ಒಂದೆರಡು ದಿನಗಳಲ್ಲಿ ಸುದೀಪ್ ಬಳಿಯೂ ಮಾತನಾಡುತ್ತೇನೆ. ನಾನು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದರೆ ಮಾತ್ರ ಈ ವಿಷಯಕ್ಕೆ ಪರಿಹಾರ ಹುಡುಕುತ್ತೇವೆ ಎಂದು ರವಿಚಂದ್ರನ್ ತಿಳಿಸಿದ್ದಾರೆ.
ಇಡೀ ಚಿತ್ರರಂಗವೇ ಒಂದು ಕುಟುಂಬ. ಕಲಾವಿದರು, ನಿರ್ಮಾಪಕರು ಕಣ್ಣುಗಳಿದ್ದಂತೆ. ಸುದೀಪ್ ಒಳ್ಳೆಯ ಸ್ನೇಹಿತ, ನನ್ನ ತಮ್ಮ ಇದ್ದಂತೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಕುಮಾರ್ ಮತ್ತು ಸುದೀಪ್ ನಡುವೆ ಏನು ನಡೆದಿದೆ ಎಂಬುದು ಅವರಿಗೆ ಮಾತ್ರ ಗೊತ್ತು. ಸಮಸ್ಯೆ ಬಗೆಹರಿಯಲಿದೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.