
ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ 49ನೇ ಹುಟ್ಟುಹಬ್ಬವನ್ನು ಅಪ್ಪು ಉತ್ಸವ ಹೆಸರಲ್ಲಿ ರಾಜ್ಯದೆಲ್ಲೆಡೆ ಆಚರಿಸಲಾಗುತ್ತಿದೆ.
ಅಭಿಮಾನಿಗಳು ಅಪ್ಪು ಉತ್ಸವ ಹೆಸರಿನಲ್ಲಿ ವಿವಿಧ ಕಾರ್ಯಕ್ರಮಗಳವನ್ನು ಹಮ್ಮಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅಭಿನಯದ ಚಿತ್ರಗಳ ಪ್ರದರ್ಶನ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ಅನ್ನದಾನ, ಶಾಲೆ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಭೇಟಿ ನೀಡಿದ್ದಾರೆ. ಕುಟುಂಬ ಸದಸ್ಯರಿಂದಲೂ ಪೂಜೆ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಕಂಠೀರವ ಸ್ಟುಡಿಯೋ ಸಮಾಧಿ ಬಳಿ ಜನ್ಮದಿನ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪುನೀತ್ ಇಲ್ಲದೆ ಎರಡನೇ ವರ್ಷದ ಜನ್ಮದಿನ ನಡೆಯುತ್ತಿದೆ.
ಅಪ್ಪು ಸಮಾಧಿ ಬಳಿ ಮಾತನಾಡಿದ ನಟ ರಾಘವೇಂದ್ರ ರಾಜಕುಮಾರ್, ಅಪ್ಪು ಬದುಕಿದ್ದಾನೆ ಎಂಬುದಕ್ಕೆ ಇಲ್ಲಿ ಬಂದಿರುವ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ. ಜನ ಇನ್ನೂ ಪುನೀತ್ ರಾಜಕುಮಾರ್ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾರೆ. ಅಪ್ಪು ಮೇಲಿನ ಜನರ ಪ್ರೀತಿ-ವಿಶ್ವಾಸಕ್ಕೆ ನಾನು ಏನೂ ಹೇಳಲಾರೆ. ಅಪ್ಪು ಆದರ್ಶಗಳನ್ನು ಅಳವಡಿಸಿಕೊಂಡು ನಾವೆಲ್ಲ ಮುನ್ನಡೆಯೋಣ ಎಂದು ಹೇಳಿದ್ದಾರೆ.