ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಕಾವೇರಿ ಹೋರಾಟದಲ್ಲಿ ಭಾಗವಹಿಸಿದ್ದ ನಟರಾದ ದರ್ಶನ್ ಮತ್ತು ಧ್ರುವ ಸರ್ಜಾ ಅವರ ನಡುವೆ ಮನಸ್ತಾಪ ಬಹಿರಂಗವಾಗಿತ್ತು.
ವೇದಿಕೆಗೆ ಬಂದ ದರ್ಶನ್ ಎಲ್ಲರನ್ನೂ ಮಾತನಾಡಿಸಿ ಕೈ ಕುಲುಕಿದರೂ ಧ್ರುವ ಸರ್ಜಾ ಅವರೊಂದಿಗೆ ಮಾತನಾಡದಿರುವುದು ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.
ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಧ್ರುವ ಸರ್ಜಾ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್ ಜೊತೆಗಿನ ಮನಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು, ನನ್ನಲ್ಲಿರುವ ಕೆಲವು ಗೊಂದಲ, ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಹೇಳಿದ್ದಾರೆ.
ನಾಟಕೀಯವಾಗಿ ಇರುವುದು ನನಗೆ ಬರುವುದಿಲ್ಲ. ಒಳಗೊಂದು, ಹೊರಗೊಂದು ರೀತಿ ಇರುವುದು ಗೊತ್ತಿಲ್ಲ. ದರ್ಶನ್ ಸರ್ ಸೀನಿಯರ್. ಅವರು ಹಿರಿಯ ನಟರು, ಅವರ ಉಪಸ್ಥಿತಿಗೆ, ಅನುಪಸ್ಥಿಗೆ ಅದರದ್ದೇ ಆದ ಮಹತ್ವವಿದೆ. ನಾವು ಅವರು ಇಲ್ಲದಿದ್ದರೂ ಗೌರವಿಸುತ್ತೇವೆ. ಆದರೆ, ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳುತ್ತೇನೆ. ನನಗೂ ಸ್ವಾಭಿಮಾನ ಇದೆ. ದರ್ಶನ್ ಅವರೊಂದಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅಪಪ್ರಚಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದರ್ಶನ್ ಅವರ ಬಗ್ಗೆ ನಾನು ಹೇಳುವುದು ಇಷ್ಟೇ. ಅವರು ಹಿರಿಯ ನಟರು, ಅವರು ಇಲ್ಲದಿದ್ದರೂ ಗೌರವಿಸುತ್ತೇವೆ. ನನ್ನಲ್ಲಿರುವ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಧ್ರುವ ಸರ್ಜಾ ಹೇಳಿದ್ದಾರೆ.