ಬೆಂಗಳೂರು: ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆಯುವುದನ್ನು ನಿರಂತರವಾಗಿ ಮುಂದುವರೆಸಿದಲ್ಲಿ ಮಾನ್ಯತೆ ರದ್ದುಪಡಿಸಲಾಗುವುದು.
ವೃತ್ತಿಪರ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಬಗ್ಗೆ ವಿದ್ಯಾರ್ಥಿಗಳು ದೂರು ನೀಡಿದರೆ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ರಾಜ್ಯ ಸರ್ಕಾರ ನಿಗದಿ ಮಾಡಿದ ಶುಲ್ಕಕ್ಕಿಂತ ಹೆಚ್ಚುವರಿಯಾಗಿ 20 ಸಾವಿರ ರೂ. ತೆಗೆದುಕೊಳ್ಳಬಹುದು ಎಂದು ಈ ಹಿಂದಿನ ಬಿಜೆಪಿ ಸರ್ಕಾರ ಆದೇಶ ಮಾಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೌಶಲ ಶಿಕ್ಷಣಕ್ಕಾಗಿ 5 ರಿಂದ 15 ಸಾವಿರ ರೂ. ಪಡೆಯಲು ಕಾಲೇಜುಗಳಿಗೆ ಅವಕಾಶವಿದೆ. ಇದರ ಹೊರತಾಗಿ ಹೆಚ್ಚುವರಿ ಶುಲ್ಕ ಪಡೆದ ಕಾಲೇಜುಗಳ ವಿರುದ್ಧ ಪ್ರವೇಶ ಮೇಲ್ವಿಚಾರಣಾ ಸಮಿತಿಯಲ್ಲಿ ದೂರು ದಾಖಲಾಗಿದ್ದು, ಅಂತಹ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿ ವಿದ್ಯಾರ್ಥಿಗಳಿಗೆ ಶುಲ್ಕವನ್ನು ವಾಪಸ್ ಕೊಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆದ ಎರಡು ಖಾಸಗಿ ಕಾಲೇಜುಗಳ ವಿರುದ್ಧ ದೂರು ಸಲ್ಲಿಕೆಯಾಗಿದ್ದು, ಈ ಸಂಬಂಧ ಶುಲ್ಕ ನಿಯಂತ್ರಣ ಸಮಿತಿ ವಿಚಾರಣೆ ನಡೆಸಿ ಶುಲ್ಕ ಮರುಪಾವತಿಗೆ ಆದೇಶಿಸಿದೆ. ನಿಯಮದ ಪ್ರಕಾರ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸುವ ಹಾಗೂ ಮಾನ್ಯತೆ ರದ್ದುಪಡಿಸುವ ಅವಕಾಶವಿದೆ. ಒಂದೆರಡು ದೂರು ಆಧರಿಸಿ ದಂಡ ಅಥವಾ ಮಾನ್ಯತೆ ರದ್ದುಪಡಿಸುವುದಿಲ್ಲ. ಪದೇಪದೇ ದೂರು ಬಂದರೆ ದಂಡ ವಿಧಿಸುವ ಜೊತೆಗೆ ಮಾನ್ಯತೆ ರದ್ದು ಪಡಿಸಲಾಗುವುದು ಎಂದು ಹೇಳಿದ್ದಾರೆ.