ದಾವಣಗೆರೆ: ಕೆಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿ ಗ್ರಾಹಕರು ಒತ್ತೆ ಇಟ್ಟಿದ್ದ ಚಿನ್ನಾಭರಣ ಕದ್ದು ಬೇರೆ ಬ್ಯಾಂಕುಗಳಲ್ಲಿ ಅಡವಿಟ್ಟು ಎರಡು ಕೋಟಿಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಬ್ಯಾಂಕ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಚಿನ್ನಾಭರಣ ಸಾಲ ವಿಭಾಗದ ಅಧಿಕಾರಿ ಟಿ.ಪಿ. ಸಂಜಯ್(33) ಬಂಧಿತ ಆರೋಪಿ. ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್ ನಿಂದ ಚಿನ್ನಾಭರಣ ಕದ್ದು ರಾಷ್ಟ್ರೀಕೃತ ಬ್ಯಾಂಕ್ ಮತ್ತು ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದ. ಹೀಗೆ ಬೇರೆ ಬ್ಯಾಂಕುಗಳಲ್ಲಿ ಸಂಜಯ್ ಒತ್ತಿ ಇಟ್ಟಿದ್ದ 3 ಕೆಜಿ 643 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಎಸ್‍ಪಿ ಉಮಾ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಂಜಯ್ ತಾನು ಉದ್ಯೋಗದಲ್ಲಿದ್ದ ಬ್ಯಾಂಕ್ ನಲ್ಲಿ ಸ್ನೇಹಿತರು ಮತ್ತು ಸಂಬಂಧಿಕರ ಹೆಸರಿನಲ್ಲಿ ಎರಡು ಕೆಜಿ ನಕಲಿ ಚಿನ್ನಾಭರಣವನ್ನು ತಾನೇ ಅಡವಿಟ್ಟುಕೊಂಡು 1.52 ಕೋಟಿ ರೂ. ಸಾಲ ಪಡೆದುಕೊಂಡಿದ್ದ. ಆನ್ಲೈನ್ ಜೂಜು, ಮೋಜು ಮಸ್ತಿಗೆ ಬಹುತೇಕ ಹಣವನ್ನು ಖರ್ಚು ಮಾಡಿದ್ದ. ಗೋವಾ ಇತರ ಕಡೆ ಪ್ರವಾಸಕ್ಕೆ ತೆರಳಿ ಹಣವನ್ನು ದುಂದು ವೆಚ್ಚ ಮಾಡಿದ್ದಾನೆ. ಬ್ಯಾಂಕ್ ಅಧಿಕಾರಿಗಳು ಏಪ್ರಿಲ್ ನಲ್ಲಿ ಚಿನ್ನಾಭರಣ ಸಾಲದ ಲೆಕ್ಕಪರಿಶೋಧನೆ ನಡೆಸಿದಾಗ ಗ್ರಾಹಕರು ಒತ್ತೆ ಇಟ್ಟಿರುವ ಚಿನ್ನ ಕಳುವಾಗಿರುವುದು ಗೊತ್ತಾಗಿತ್ತು. ಸಿಸಿಟಿವಿ ಪರಿಶೀಲಿಸಿದ ಅಧಿಕಾರಿಗಳು ಕೆಟಿಜೆ ನಗರ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲಾ ಸಂಗತಿ ಬಯಲಾಗಿದೆ.