ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಕಂತಿನಲ್ಲಿ ತೆರಿಗೆ ಪಾವತಿ ಸೌಲಭ್ಯ…?

ಬೆಂಗಳೂರು: ವಾಣಿಜ್ಯ ವಾಹನಗಳ ತೆರಿಗೆ ಪಾವತಿಗೆ ರಾಜ್ಯ ಸರ್ಕಾರದಿಂದ ಕಂತು ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದೆ. ತೆರಿಗೆ ದರದಲ್ಲಿ ಭಾರಿ ಏರಿಕೆಯಾದ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಅನುಕೂಲ ಕಲ್ಪಿಸಲು ಕಂತಿನಲ್ಲಿ ತೆರೆಗೆ ಪಾವತಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

ಮೋಟಾರ್ ವಾಹನ ತೆರಿಗೆ ಪರಿಷ್ಕರಣೆಯಾಗಿರುವುದರಿಂದ ವಾಣಿಜ್ಯ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಹೀಗಾಗಿ ಕಂತುಗಳಲ್ಲಿ ತೆರಿಗೆ ಪಾವತಿಗೆ ಅವಕಾಶ ನೀಡುವ ವ್ಯವಸ್ಥೆ ಆರಂಭಿಸಲಾಗುವುದು. ಸಾರಿಗೆ ಇಲಾಖೆ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಮೋಟಾರ್ ವಾಹನಗಳ ತೆರಿಗೆ ನಿರ್ಧರಣೆ ಮಸೂದೆಗೆ ಇತ್ತೀಚೆಗೆ ಅನುಮೋದನೆ ನೀಡಿ ಜಾರಿಗೊಳಿಸಲಾಗಿದೆ.

ವಾಣಿಜ್ಯ ಬಳಕೆ ವಾಹನಗಳ ಮೇಲಿನ ತೆರಿಗೆ ಭಾರಿ ಹೆಚ್ಚಾಗಿದೆ. ತೆರಿಗೆ ಏರಿಕೆ ಕೈಬಿಡಬೇಕು. ಇಲ್ಲವೇ ಆರು ಕಂತಗಳಲ್ಲಿ ಪಾವತಿಗೆ ಅವಕಾಶ ನೀಡಬೇಕೆಂದು ಸಂಘಟನೆಗಳು ಮನವಿ ಮಾಡಿದ್ದು, ಶೀಘ್ರದಲ್ಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಭರವಸೆ ನೀಡಿದ್ದಾರೆ.

ಶಾಲಾ ಕಾಲೇಜು ವಾಹನ, ಅತಿ ಭಾರದ ಸರಕು ಸಾಗಣೆ ವಾಹನ, ಮೋಟಾರ್ ಕ್ಯಾಬ್ ಗಳ ತೆರಿಗೆ ಹೆಚ್ಚಿಸಲಾಗಿದೆ. ಇತರ ಸಂಸ್ಥೆಗಳ ಒಡೆತನದಲ್ಲಿರುವ ಶಾಲಾ ವಾಹನಗಳಿಗೆ ಪ್ರತಿ ಚದರ ಮೀಟರ್ ಗೆ 80 ರೂ. ನಿಂದ 200 ರೂ.ವರೆಗೆಗೆ ತೆರಿಗೆ ಹೆಚ್ಚಳ ಮಾಡಲಾಗಿದೆ. ಅತಿ ಭಾರದ 1.5 ಟನ್ ನಿಂದ 5.5 ಟನ್ ಮತ್ತು 12 ಟನ್ ವರೆಗಿನ ವಾಹನಗಳ ತೆರಿಗೆಯನ್ನು ಹೆಚ್ಚಳ ಮಾಡಲಾಗಿದೆ.

10 ಲಕ್ಷ ರೂ. ನಿಂದ 15 ಲಕ್ಷ ರೂ.ವರೆಗಿನ ಕ್ಯಾಬ್ ಗಳಿಗೆ ಅವುಗಳ ಮೌಲ್ಯದ ಶೇಕಡ 9 ರಷ್ಟು ಮತ್ತು ಶೇಕಡ 1 ಸೆಸ್ ಸೇರಿ ಶೇಕಡ 10 ರಷ್ಟು ತೆರಿಗೆ ವಿಧಿಸಲಾಗುತ್ತದೆ. 15 ಲಕ್ಷ ರೂ. ಮೇಲ್ಪಟ್ಟ ಕ್ಯಾಬ್ ಗಳಿಗೆ ಅವುಗಳ ಮೌಲ್ಯದ ಶೇಕಡ 15ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಕೊರೋನಾದಿಂದ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ನಂತರ ಮತ್ತಷ್ಟು ಆರ್ಥಿಕ ಪೆಟ್ಟು ಬಿದ್ದಿದ್ದು, ಹೀಗಾಗಿ ತೆರಿಗೆ ಪಾವತಿಸಲು ಕಂತಿನಲ್ಲಿ ಅವಕಾಶ ನೀಡಬೇಕು. ಇಲ್ಲವೇ ಹೆಚ್ಚಳ ಮುಂದೂಡಬೇಕೆಂದು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತೆರಿಗೆ ಪಾವತಿಗೆ ಕಂತು ಸೌಲಭ್ಯ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read