ನವದೆಹಲಿ: ದಕ್ಷಿಣ ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪದ ನಂತರ ಗುರುವಾರ ರಾತ್ರಿ ದೆಹಲಿ-ಎನ್‌ಸಿಆರ್ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಇತರ ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಹವಾಮಾನ ಕೇಂದ್ರ ಶ್ರೀನಗರ(ಎಂಸಿಎಸ್) ತಿಳಿಸಿದೆ.
ದಕ್ಷಿಣ ಅಫ್ಘಾನಿಸ್ತಾನದಲ್ಲಿ 160 ಕಿಲೋಮೀಟರ್ ಆಳದಲ್ಲಿ ರಾತ್ರಿ 10.26 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಎಂಸಿಎಸ್ ಪ್ರಕಾರ ಇದು 34.58 ಉತ್ತರ ಅಕ್ಷಾಂಶ ಮತ್ತು 70.66 ಪೂರ್ವ ರೇಖಾಂಶದಲ್ಲಿ ಸಂಭವಿಸಿದೆ.
ವಾರದಲ್ಲಿ ಮೂರನೇ ಭೂಕಂಪ
ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಅಫ್ಘಾನಿಸ್ತಾನವನ್ನು ಅಪ್ಪಳಿಸಿದ ಮೂರನೇ ಭೂಕಂಪ ಇದಾಗಿದೆ. ಭಾನುವಾರ 6.3 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದರೆ, ಮಂಗಳವಾರ 5.3 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ.
ಭಾನುವಾರದ ಭೂಕಂಪವು ಅಫ್ಘಾನಿಸ್ತಾನದಲ್ಲಿ 2,000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ತಾಲಿಬಾನ್ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಸಾವಿನ ಸಂಖ್ಯೆ 2,205 ಆಗಿದ್ದು, ಹೆಚ್ಚಿನ ಸಾವುನೋವುಗಳು ಕುನಾರ್‌ನಲ್ಲಿ ಸಂಭವಿಸಿವೆ. ಅಫ್ಘಾನಿಸ್ತಾನದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ.