ಬೆಳಗಾವಿ: ಸೂರ್ಯನಗರ 1ನೇ ಹಂತ ವಸತಿ ಬಡಾವಣೆಯನ್ನು ಚಂದಾಪುರ ಮತ್ತು ಬೊಮ್ಮಸಂದ್ರ ಪುರಸಭೆಗಳಿಗೆ ಹಸ್ತಾoತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಸದರಿ ಪುರಸಭೆಗಳು ಹಸ್ತಾಂತರ ಮಾಡಿಕೊಂಡು ಬಡಾವಣೆಯ ಸ್ವತ್ತುಗಳಿಗೆ ಇ-ಖಾತಾವನ್ನು ಮಾಡಿಕೊಡಲು ಕ್ರಮ ವಹಿಸಬೇಕಾಗಿದೆ. ಈ ವಿಷಯದಲ್ಲಿ ಗೃಹ ಮಂಡಳಿಯಿಂದ ನಿರ್ಲಕ್ಷ್ಯವಾಗಿಲ್ಲ ಎಂದು ವಸತಿ, ವಕ್ಫ್ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿ ಮಾತನಾಡಿದ ಸಚಿವರು, ಸೂರ್ಯನಗರ 1ನೇ ಹಂತ ಬಡಾವಣೆಯು ಚಂದಾಪುರ ಹಾಗೂ ಬೊಮ್ಮಸಂದ್ರ ಪುರಸಭೆಗಳ ವ್ಯಾಪ್ತಿಗೆ ಬರುತ್ತದೆ. ಕರ್ನಾಟಕ ಗೃಹ ಮಂಡಳಿ ಬಡಾವಣೆಯನ್ನು ನಿರ್ವಹಣೆಗಾಗಿ ಹಸ್ತಾಂತರ ಮಾಡಿಕೊಳ್ಳುವಂತೆ ಚಂದಾಪುರ ಹಾಗೂ ಬೊಮ್ಮಸಂದ್ರ ಪುರಸಭೆಗಳಿಗೆ ಸಾಕಷ್ಟು ಬಾರಿ ಮಂಡಳಿಯಿಂದ ಪತ್ರ ವ್ಯವಹಾರ ಮಾಡಲಾಗಿದೆ.
ಚಂದಾಪುರ ಮತ್ತು ಬೊಮ್ಮಸಂದ್ರ ಪುರಸಭೆಗಳು ಸೂರ್ಯನಗರ 1ನೇ ಹಂತ ಬಡಾವಣೆಯನ್ನು ಹಸ್ತಾಂತರ ಮಾಡಿಕೊಂಡು ಬಡಾವಣೆಯ ಸ್ವತ್ತುಗಳಿಗೆ ಇ-ಖಾತಾವನ್ನು ಮಾಡಿಕೊಡಲು ಕ್ರಮ ವಹಿಸಬೇಕಾಗಿದೆ ಎಂದರು.
ಕರ್ನಾಟಕ ಗೃಹ ಮಂಡಳಿ ಬಡಾವಣೆಯ ಸ್ವತ್ತುಗಳಿಗೆ ಮಂಡಳಿಯಿಂದಲೇ ಇ-ಖಾತಾ ನೀಡಲು ಸರ್ಕಾರದ ಆದೇಶವಾಗಿದ್ದು ಅದರಂತೆ 1 ತಿಂಗಳೊಳಗೆ ಇ-ಖಾತಾ ನೀಡಲು ಕ್ರಮಕೈಗೊಳ್ಳಲಾಗುವುದು ಎಂದರು.
ಸೂರ್ಯನಗರ 1ನೇ ಹಂತದ ಬಡಾವಣೆಯಲ್ಲಿ ಡಾಂಬರೀಕೃತ ರಸ್ತೆಗಳು, ಮಳೆ ನೀರಿನ ಚರಂಡಿ, ಒಳಚರಂಡಿ ವ್ಯವಸ್ಥೆ, ಉದ್ಯಾನವನಗಳ ಅಭಿವೃದ್ಧಿ, ಕಾವೇರಿ ಕುಡಿಯುವ ನೀರಿನ ವ್ಯವಸ್ಥೆ ಒಳಗೊಂಡಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಕರ್ನಾಟಕ ಗೃಹ ಮಂಡಳಿಯ ಕಾಯ್ದೆಯನ್ವಯ ಯಾವುದೇ ಲಾಭ ನಷ್ಟವಿಲ್ಲದೆ ವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು ಬಡಾವಣೆಯ ನಿರ್ವಹಣೆಗೆ ತಗಲುವ ವೆಚ್ಚವನ್ನು ಮಾತ್ರ ಸ್ವತ್ತಿನ ಮಾಲೀಕರಿಂದ ತೆರಿಗೆ/ನಿರ್ವಹಣಾ ವೆಚ್ಚವಾಗಿ ಪಾವತಿಸಿಕೊಳ್ಳಲಾಗುವುದು ಎಂದರು.
