ಕೋಲಾರ: ವರದಕ್ಷಿಣೆ ಕಿರುಕುಳ, ಪತಿ ಮನೆಯವರ ಹಿಂಸೆಗೆ ಬೇಸತ್ತ ಮಹಿಳೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಾಡದೇವನಹಳ್ಳಿಯಲ್ಲಿ ನಡೆದಿದೆ.
ರಶ್ಮಿ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ವರ್ಷದ ಹಿಂದಷ್ಟೇ ದಿನೇಶ್ ಎಂಬಾತನನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಅತ್ತೆ, ದೊಡ್ದತ್ತೆ ಹಾಗೂ ಕುಟುಂಬದವರು ನೀಡುತ್ತಿದ್ದ ವರದಕ್ಷಿಣೆ ಕಿರುಕುಳ, ಅವಮಾನ, ಹಿಂಸೆಗೆ ಮನನೊಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ದಿನೇಶ್ ಹಾಗೂ ರಶ್ಮಿ ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿ ವಿವಾಹವಾಗಿದ್ದರು. ಆರಂಭದಲ್ಲಿ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ ಬರಬರುತ್ತಾ ರಶ್ಮಿಗೆ ಆಕೆಯ ಅತ್ತೆ ಸರೋಜಮ್ಮ ಹಾಗೂ ದೊಡ್ದತ್ತೆ ರತ್ನಮ್ಮ ವರದಕ್ಷಿಣೆಗಾಗಿ ಹಿಂಸಿಸುತ್ತಿದ್ದರಂತೆ. ಹೊಡೆಯುತ್ತಿದ್ದರಂತೆ ಈ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಿ ರಶ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಶ್ಮಿ ಸಾವಿನ ಬೆನ್ನಲ್ಲೇ ಪತಿ ದಿನೇಶ್, ಅತ್ತೆ-ಮಾವ ಹಾಗೂ ದೊಡ್ಡತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.