ಹಾಸನ: ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪತಿಯೇ ಪತ್ನಿಯನ್ನು ಕೊಲೆಗೈದಿರುವ ಆರೋಪ ಕೇಳಿಬಂದಿದೆ. ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ಅಂಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚಂದ್ರಕಲಾ (27) ಮೃತ ಮಹಿಳೆ. ಪತಿ ಆನಂದ್ ಚಂದ್ರಕಲಾಳನ್ನು ಹತ್ಯೆಗೈದು ನೇಣುಬಿಗಿದು ಪರಾರಿಯಾಗಿದ್ದಾನೆ ಎಂದು ಮಹಿಳೆಯ ಕುಟುಂಬದವರು ಆರೋಪಿಸಿದ್ದಾರೆ.
ಏಳು ವರ್ಷಗಳ ಹಿಂದೆ ಆನಂದ್ ಹಾಗೂ ಚಂದ್ರಕಲಾ ವಿವಾಹವಾಗಿತ್ತು. ಆನಂದ್ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಅಲ್ಲದೇ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ತವರಿನಿಂದ ವರದಕ್ಷಿಣೆ ಹಣ ತರುವಂತೆ ನಿರಂತರವಾಗಿ ಹಿಂಸಿಸುತ್ತಿದ್ದ. ಹಲವು ಬಾರಿ ಪತ್ನಿ ಮೇಲೆ ಹಲ್ಲೆಯನ್ನೂ ನಡೆಸಿದ್ದ. ನಿನ್ನೆ ರಾತ್ರಿ ಪತ್ನಿ ಚಂದ್ರಕಲಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆನಂದ್, ಬಳಿಕ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿ ಮನೆಯಿಂದ ಪರಾರಿಯಾಗಿದ್ದಾನೆ ಎಂದು ಚಂದ್ರಕಲಾ ಪೋಷಕರು, ಸಂಬಂಧಿಕರು ಆರೋಪಿಸಿದ್ದಾರೆ.
ಮನೆಯ ಎದುರು ಮೃತ ಚಂದ್ರಕಲಾ ಪೋಷಕರು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಆನಂದ್ ಬರುವರೆಗೆ ಶವ ಮೇಲೆತ್ತಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.