ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿ ಮಹಾಶಯ ತನ್ನ ಪತ್ನಿ ಹಾಗೂ ಮಾವನಿಗೆ ಚಾಕು ಇರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬ್ಯಾಂಕ್ ಉದ್ಯೋಗಿಯಾಗಿರುವ ಪುಲಿ ಸಾಯಿಕುಮಾರ್ ಪತ್ನಿ ರಮ್ಯಾ ಹಾಗೂ ಮಗಳಿಗೆ ಚಾಕು ಇರಿಯಲು ಯತ್ನಿಸಿದ್ದಾನೆ. ಈ ವೇಳೆ ರಮ್ಯಾಳ ತಂದೆ ತಪ್ಪಿಸಲು ಮುಂದಾಗಿದ್ದಾರೆ. ಅವರ ಮೇಲೆ ಖಾರದ ಪುಡಿ ಎರಚಿ ಚಾಕು ಇರಿದು ಪರಾರಿಯಾಗಿದ್ದಾನೆ.
ಬ್ಯಾಂಕ್ ಉದ್ಯೋಗಿಯಾಗಿರುವ ಪುಲಿ ಸಾಯಿಕುಮಾರ್ 2021ರಲ್ಲಿ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿ ರಮ್ಯಾಳನ್ನು ವಿವಾಹವಾಗಿದ್ದ. ರಮ್ಯಾ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೇಸರ್ ಆಗಿ ಕೆಲಸ ಮಾಡುತ್ತಿದ್ದರು. ಸದಾಕಾಲ ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ದುಡ್ಡಿನ ವಿಚಾರವಾಗಿಯೇ ಕ್ಯಾತೆ ತೆಗೆದಿದ್ದ ಸಾಯಿಕುಮಾರ್, ಪತ್ನಿ ದುಡ್ಡು ಕೊಡಲು ನಿರಾಕರಿಸಿದಾಗ ಆಕೆಗೆ ಚಾಕು ಇರಿದಿದ್ದಾನೆ. ಇದನ್ನು ತಪ್ಪಿಸಲು ಬಂದ ಮಾವನ ಕಣ್ಣಿಗೆ ಖಾರದ ಪುಡಿ ಎರಚಿ ಚಾಕು ಇರಿದು ಎಸ್ಕೇಪ್ ಆಗಿದ್ದಾನೆ.
ರಮ್ಯಾ ಪತಿ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪತಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾಳೆ.