ಬೆಂಗಳೂರು: ‘ಬಿಗ್ ಬಾಸ್’ ಖ್ಯಾತಿಯ ಲಾಯರ್ ಜಗದೀಶ್ ವಿರುದ್ಧ ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹಕ್ಕುಚ್ಯುತಿ ಮಂಡಿಸಿದ್ದಾರೆ. ಅವರ ಹಕ್ಕುಚ್ಯುತಿ ಪ್ರಸ್ತಾಪವನ್ನು ಸದನದ ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಲಾಗಿದೆ.
ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಎಸ್.ಆರ್. ವಿಶ್ವನಾಥ್ ಅವರು ಕಳೆದ ವಾರ ಅಧಿವೇಶನದಲ್ಲಿ ನಾನು ಮಾತನಾಡಿರುವುದನ್ನು ಪ್ರಸ್ತಾಪಿಸಿ ನನ್ನನ್ನು ಅಯೋಗ್ಯ ಎಂದೆಲ್ಲಾ ಆ ಲಾಯರ್ ನಿಂದಿಸಿದ್ದಾರೆ. ಧರ್ಮಸ್ಥಳಕ್ಕೆ ಭಕ್ತನಾಗಿ ಹೋಗಿ ಬಂದಿರುವ ನನ್ನ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿಯ ಬಳಿ 100 ಕೋಟಿ ರೂಪಾಯಿ ಕಪ್ಪು ಹಣ ಇಟ್ಟಿದ್ದೇನೆ. ಅವರ ಪರವಾಗಿ ಭೂಮಿಯನ್ನು ಡಿನೋಟಿಫೈ ಮಾಡಿಸುತ್ತಿದ್ದೇನೆ ಎಂದೆಲ್ಲ ದೂರುತ್ತಿದ್ದಾರೆ. ಇದರಿಂದ ನನಗೆ ನನ್ನ ಹಕ್ಕುಗಳಿಗೆ ಚ್ಯುತಿಯಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಇದು ಸದಸ್ಯರ ಹಕ್ಕುಚ್ಯುತಿ ಮಾತ್ರವಲ್ಲ, ಸದನಕ್ಕೆ ಆದ ಅಗೌರವ ಕೂಡ ಆಗಿದೆ. ವಿಶ್ವನಾಥ್ ಅವರಿಂದ ನಿಯಮಾವಳಿ ನೋಟಿಸ್ ಪಡೆದು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪೀಕರ್ ಸಹಮತ ವ್ಯಕ್ತಪಡಿಸಿದ್ದಾರೆ.