ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತಂಡ ತನಿಖೆ ನಡೆಸುತ್ತಿದೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಸದನದಲ್ಲಿ ಸೋಮವಾರ ಉತ್ತರ ನೀಡಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಆಹಾರ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ಸೇರಿದಂತೆ ಸತ್ಯವನ್ನು ಪತ್ತೆ ಹಚ್ಚಲು ಎಸ್ ಐಟಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಸೋಮವಾರ ಗೃಹ ಸಚಿವ ಪರಮೇಶ್ವರ್ ಸದನದಲ್ಲಿ ಎಲ್ಲದಕ್ಕೂ ಉತ್ತರ ನೀಡಲಿದ್ದಾರೆ ಎಂದರು.
ನಿಜಾಂಶ ಹೊರಬರಬೇಕು ಎಂಬುದೇ ಎಸ್ ಐಟಿ ರಚನೆ ಉದ್ದೇಶ. ತನಿಖೆ ಸಮರ್ಪಕವಾಗಿ ನಡೆಯುತ್ತಿದೆ. ಯಾರಿಗೂ ತನಿಖೆ ಬಗ್ಗೆ ಅನುಮಾನವಿಲ್ಲ. ಯಾರೋ ಹೇಳಿದರೆಂದು ನಾವು ಅದಕ್ಕೆ ಪ್ರತಿಕ್ರಿಯೆ ನೀಡಲ್ಲ. ಸತ್ಯಾಂಶವನ್ನು ನಾವು ಜನರ ಮುಂದೆ ಇಡುತ್ತೇವೆ. ಇದರ ಹಿಂದೆ ಷಡ್ಯಂತ್ರ ಇದ್ದರೆ ಅದನ್ನೂ ಪರಿಗಣಿಸಲಾಗುತ್ತದೆ. ಎಲ್ಲಾ ಸಂಗತಿಗಳನ್ನೂ ತನಿಖೆ ಮೂಲಕವೇ ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.