ಮಂಗಳೂರು: ಮಹಿಳೆಯೊಬ್ಬರಿಗೆ ವಂಚಕರು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಕೋಟಿ ಕೋಟಿ ಹಣ ವಂಚಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದಿದೆ.
ಮಹಿಳೆಗೆ ಕರೆ ಮಾಡಿರುವ ವಂಚಕರು ಡಿಜಿಟಲ್ ಅರೆಸ್ಟ್ ಎಂದು ಹೇಳಿ ಹಂತ ಹಂತವಾಗಿ 3.15ಕೋಟಿ ಹಣವನ್ನು ದೋಚಿದ್ದಾರೆ. ಜೂನ್ 6ರಂದು ಬೆಳಿಗ್ಗೆ 10.25ರ ಸುಮಾರಿಗೆ ಮಹಿಳೆಗೆ ಕರೆ ಮಾಡಿರುವ ವಂಚಕರು, ತಾನು ಇನ್ಸ್ ಪೆಕ್ಟರ್ ಅನು ಶರ್ಮಾ ಎಂದು ಪರಿಚಯಿಸಿಕೊಂಡಿದ್ದಾರೆ. ನ್ಯಾಷನಲ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಮಹಿಳೆಯ ಗಂಡನಿಂದ ಹೊಸ ಸಿಮ್ ಖರೀದಿಸಲಾಗಿದ್ದು, ಆ ಸಿಮ್ ನಿಂದ ವಂಚನೆ ಕರೆಗಳು ಮತ್ತು ಲಿಂಕ್ ಗಳನ್ನು ಸಾರ್ವಜನಿಕರಿಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಕರೆಯನ್ನು ಸುಹಾಸ್ ಪೊಲೀಸ್ ಠಾನೆಗೆ ವರ್ಗಾಯಿಸಲಾಗಿದೆ ಎಂದು ಹೇಳಿ ಸಬ್ ಇನ್ಸ್ ಪೆಕ್ಟರ್ ಮೋಹನ್ ಕುಮಾರ್ ಎಂಬಾತ ಮಾತನಾಡುತ್ತಿದ್ದಾನೆ ಎಂದು ಹೇಳಿ ಕರೆ ಕಟ್ ಮಾಡದಂತೆ ಹೇಳಿದ್ದಾರೆ.
ಬಳಿಕ ಪಬ್ಲಿಕ್ ಪ್ರಾಸಿಕ್ಯೂಟರ್ ದೀಪಕ್ ವೆಂಕಟರಮಣ ಎಂಬಾತನಿಗೆ ಕರೆ ವರ್ಗಾಯಿಸಿ, ಮಹಿಳೆ ಹಾಗೂ ಆಕೆಯ ಪತಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ. ಬ್ಯಾಂಕ್ ಖಾತೆ ಪರಿಶೀಲಿಸಲು ಹಣ ಪಾವತಿಸಲು ಹೇಳಿದ್ದಾರೆ. ಪಾವತಿಸಿದ ಹಣ ಎಲ್ಲವೂ ವಾಪಸ್ ಆಗುತ್ತೆ ಎಂದು ನಂಬಿಸಿದ್ದಾರೆ. ವಿಷಯ ಯಾರಿಗೂ ಬಾಯ್ಬಿಡದಂತೆ ಸೂಚಿಸಿದ್ದಾರೆ. ಭಯದಿಂದ ಮಹಿಳೆ ಯಾರಿಗೂ ಹೇಳಿಲ್ಲ. ಜೂನ್ 10ರಿಂದ ಜೂನ್ 27ರವರವರೆಗೆ ಮಹಿಳೆ ಹಾಗೂ ಆಕೆಯ ಪತಿಯ ಖಾತೆಯಿಂದ ಹಂತ ಹಂತವಾಗಿ ಬರೋಬ್ಬರಿ 3 ಕೋಟಿ 15 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿಕೊಂಡಿದ್ದಾರೆ. ಬಳಿಕ ವಂಚಕರು ಕರೆ ಬ್ಲಾಕ್ ಮಾಡಿದ್ದಾರೆ.
ಕೆಲ ದಿನಗಳ ಬಳಿಕ ಮಹಿಳೆ ತನ್ನ ಮಕ್ಕಳಿಗೆ ವಿಷಯ ತಿಳಿಸಿದಾಗ ಮೋಸ ಹೋಗಿ ಹಣ ಕಳೆದುಕೊಂಡಿರುವುದು ಗೊತ್ತಾಗಿದೆ. ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.