ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬುರುಡೆ ಗ್ಯಾಂಗ್ ಗೆ ಕೇರಳ ಮೂಲದ ಯೂಟ್ಯೂಬರ್ ಲಿಂಕ್ ಕೂಡ ಇರುವುದು ಎಸ್ ಐಟಿ ತನಿಖೆಯಲ್ಲಿ ಬಯಲಾಗಿದೆ.
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ಇದೀಗ ಕೇರಳ ಮೂಲದ ಯೂಟ್ಯೂಬರ್ ಮುನಾಫ್ ಎಂಬಾತನಿಗೆ ಎಸ್ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಮುನಾಫ್ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿಯೊಂದು ನದಿಗೆ ಬಿದ್ದು ಚಾಲಕನ ಸಮೇತ ಕೊಚ್ಚಿ ಹೋಗಿತ್ತು. ಕೊಚ್ಚಿ ಹೋಗಿದ್ದ ಲಾರಿಯಲ್ಲಿದ್ದ ಚಾಲಕ ಕೇರಳ ಮೂಲದ ಅರ್ಜುನ್ ಎಂಬಾತ ಸಾವನ್ನಪ್ಪಿದ್ದ. ಈ ಲಾರಿ ಮಾಲಿಕ ಮುನಾಫ್. ಈತ ಯೂಟ್ಯೂಬ್ ಚಾನಲನ್ನೂ ಕೂಡ ನಡೆಸುತ್ತಿದ್ದಾನೆ.
ಮುನಾಫ್ ಧರ್ಮಸ್ಥಳದ ಬಂಗ್ಲಗುಡ್ಡಕ್ಕೆ ತೆರಳಿ ಅಲ್ಲಿ ಮರದ ಕೆಳಗಿದ್ದ ಬುರುಡೆಯೊಂದನ್ನು ಬ್ಯಾಗ್ ಗೆ ತುಂಬುವ ವಿಡಿಯೋವೊಂದನ್ನು ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಮಾಡಿದ್ದ. ಧರ್ಮಸ್ಥಳದ ಬಗ್ಗೆ ಅಪಪ್ರಚಾರವನ್ನೂ ಮಾಡಿದ್ದ. ಈ ಹಿನ್ನೆಲೆಯಲ್ಲಿ ಇದೀಗ ಮುನಾಫ್ ಗೆ ನೋಟಿಸ್ ನೀಡಿರುವ ಎಸ್ ಐಟಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇನ್ನು ಮುನಾಫ್ ಮಾತ್ರವಲ್ಲ ಇನ್ನೂ ಹಲವು ಯೂಟ್ಯೂಬರ್ ಗಳಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಎಸ್ ಐಟಿ ಹಲವರನ್ನು ವಿಚಾರಣೆ ನಡೆಸಲು ಮುಂದಾಗಿದೆ ಎನ್ನಲಾಗಿದೆ.