BREAKING: ಧರ್ಮಸ್ಥಳ ಪ್ರಕರಣ: FSL ವರದಿ ಬರುವರೆಗೂ ಶೋಧಕಾರ್ಯಕ್ಕೆ ಬ್ರೇಕ್: ಮುಂದಿನ ಕಾರ್ಯಾಚರಣೆ ಬಗ್ಗೆ SITಯಿಂದಲೇ ನಿರ್ಧಾರ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಸುದೀರ್ಘ ಉತ್ತರ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ತನಿಖೆ ಮುಂದುವರೆಯಬೇಕಾ ಅಥವಾ ನಿಲ್ಲಿಸಬೇಕಾ ಎಂಬುದನ್ನು ಎಸ್ ಐಟಿಯೇ ತೀರ್ಮಾ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ನಡೆದಿರುವ ಶೋಧಕಾರ್ಯಾಚರಣೆ ಬಗ್ಗೆ ಎಫ್ ಎಸ್ ಎಲ್ ವರದಿ ಬರುವರೆಗೂ ಶೋಧಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಬಳಿಕ ಶೋಧ ಮುಂದುವರೆಸಬೇಕಾ ಅಥವಾ ಬೇಡವಾ ಎಂಬ ಬಗ್ಗೆ ಎಸ್ ಐಟಿಯೇ ನಿರ್ಧಾರ ಕೈಗೊಳ್ಳಲಿದೆ ಎಂದರು.

ಧರ್ಮಸ್ಥಳ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆ ನಡೆಸುತ್ತಿದೆ. ತನಿಖೆ ವರದಿ ಬಂದ ಬಳಿಕವೇ ಸತ್ಯಾಸತ್ಯತೆ ಹೊರಬರಲಿದೆ. ಅಂತಹ ಯಾವುದೇ ಘಟನೆ ನಡೆಯದೆಯೂ ಇರಬಹುದು. ನಡೆದೇ ಇಲ್ಲ ಎಂದೂ ಹೇಳಲು ಸಾಧ್ಯವಿಲ್ಲ. ಹಾಗಾಗಿಯೇ ತನಿಖೆಗೆ ಆದೇಶ ನೀಡಲಾಗಿದೆ. ಸತ್ಯಾಸತ್ಯತೆ ಹೊರಬರಬೇಕು ಎಂಬ ಕಾರಣಕ್ಕೆ ತನಿಖೆ ನಡೆಸಲಾಗುತ್ತಿದೆ. ಧರ್ಮಸ್ಥಳದ ವಿರುದ್ಧವಾಗಿ ನಾವ್ಯಾರೂ ಇಲ್ಲ. ಇಲ್ಲಿ ದೂರುದಾರ ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಯುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಯಾವುದೇ ಅಂತಹ ಘಟನೆ ನಡೆದಿಲ್ಲ ಎಂದಾದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇನ್ನಷ್ಟು ಭಕ್ತಿ, ಶ್ರದ್ದೆ ಹೆಚ್ಚಾಗುತ್ತದೆ. ದೂರುದಾರ ನೀಡಿರುವ ಹೇಳಿಕೆ ನಿಜವಾದರೆ ಯಾರಿಗೆ ಅನ್ಯಾಯವಾಗಿದೆ ಅವರಿಗೆ ನ್ಯಾಅಯ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಹಾಗಾಗಿಯೇ ಎಸ್ ಐಟಿ ರಚಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.

ಇಡೀ ದೇಶ ಇಂದು ಈ ಪ್ರಕರಣವನ್ನು ಗಮನಿಸುತ್ತಿದೆ. ಜುಲೈ 3, 2025ರಂದು ಅನಾಮಿಕ ವ್ಯಕ್ತಿ ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಿದ್ದ. ನೂನಾರು ಶವಗಳನ್ನು ಧರ್ಮಸ್ಥಳದ ವಿವಿಧೆಡೆ ತಾನು ಹೂತು ಹಾಕಿದ್ದಾಗಿ ಹೇಳಿದ್ದ. ತನಗೆ ಪಾಪ ಪ್ರಜ್ಞೆಯಿಂದ ಬಂದು ದೂರು ನೀಡುತ್ತಿರುವುದಾಗಿ ಹಾಗೂ ಅತ್ಯಾಚಾರ, ಕೊಲೆಗಳನ್ನು ಮಾಡಿದ ಶವಗಳನ್ನು ತನಗೆ ತಂದು ಕೊಟ್ಟು, ಜೀವಬೆದರಿಕೆ ಹಾಕಿ ತನ್ನಿಂದ ಹೂತು ಹಾಕಿಸಿದ್ದಾಗಿ ಹೇಳಿದ್ದ.

ನನಗೆ ನಿರಂತರ ಜೀವಬೆದರಿಕೆಯೊಡ್ಡಿ ಶವಗಳನ್ನು ಹೂತು ಹಾಕಿಸಿದ್ದಾರೆ ಎಂದು ದೂರು ನೀಡಿದ್ದ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆಯೂ ಕೋರಿದ್ದ. ಬಳಿಕ ಈ ಪ್ರಕರಣದ ಬಗ್ಗೆ ನ್ಯಾಯಾಧೀಶರು ತನಿಖೆ ನಡೆಸುವಂತೆ ಸೂಚಿಸಿದ್ದರು. ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ತನಿಖೆಗೆ ಮುಂದಾಗಿದ್ದರು. ಈ ವೇಳೆ ಮಹಿಳಾ ಆಯೋಗ ಎಸ್ ಐಟಿ ರಚಿಸುವಂತೆ ಪತ್ರ ಬರೆದಿತ್ತು. ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಬಗ್ಗೆ ತನಿಖೆಗೆ ಎಸ್ ಐಟಿ ರಚಿಸಿ ತನಿಖೆ ನಡೆಸುವಂತೆ ಉಲ್ಲೇಖಿಸಿತ್ತು. ಇದಾದ ಬಳಿಕ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಎಸ್ ಐಟಿ ರಚಿಸಿ ತನಿಖೆಗೆ ಆದೇಶ ನೀಡಿದೆವು ಎಂದು ತಿಳಿಸಿದ್ದಾರೆ.

ಬಳಿಕ ಎಸ್ ಐಟಿ ಆತನಿಂದ ಹೇಳಿಕೆ ಪಡೆದು ಆತ ಶವಗಳನ್ನು ಹೂತಿಟ್ಟ ಜಾಗದ ಬಗ್ಗೆ ನೀಡಿರುವ ಮಾಹಿತಿ ಮೇರೆಗೆ ಅಲ್ಲಿ ಶೋಧಕಾರ್ಯವನ್ನು ಕೈಗೊಂಡಿತು ಎಂದು ವಿವರಿಸಿದ್ದಾರೆ.


Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read