ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿರುವ ದೂರುದಾರನ ಮಂಪರು ಪರೀಕ್ಷೆ ಮಾಡಲಿ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ದೂರುದಾರ ಆ ಭೀಮಾ ಯಾರು? ಆತನ ಉದ್ದೇಶವೇನು? ಈವರೆಗೆ ಆತ 16-17 ಜಾಗ ತೋರಿಸಿದ್ದಾನೆ. ಅಲ್ಲಿ ಎಸ್ ಐಟಿ ನಡೆಸಿರುವ ಶೋಧದಲ್ಲಿ ಈವರೆಗೂ ಏನೂ ಸಿಕ್ಕಿಲ್ಲ. ಹೀಗಿರುವಾಗ ಮೊದಲು ದೂರುದಾರನ ಮಂಪರು ಪರೀಕ್ಷೆ ನಡೆಸಲಿ. ಆತ ಹೇಳುತ್ತಿರುವುದರಲ್ಲಿ ಸತ್ಯಾಂಶವಿದೆಯೇ ಎಂಬುದನ್ನು ಅರಿತು ಶೋಧಕಾರ್ಯ ಮುಂದುವರೆಸಲಿ ಎಂದು ಆಗ್ರಹಿಸಿದರು.
ಈವರೆಗೆ ಶೋಧನಡೆಸಿರುವ ಜಾಗದಲ್ಲಿ ಎಸ್ ಐಟಿಗೆ ಏನೂ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಈವರೆಗಿನ ತನಿಖೆ ಬಗ್ಗೆ ಎಸ್ ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ನಡೆಯುತ್ತಿದೆ. ಇದರಿಂದ ಭಕ್ತರ ಭಾವನೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿದರು.