ಮಂಗಳೂರು: ಧರ್ಮಸ್ಥಳ ವಿರುದ್ಧ ಪಿತೂರಿ ನಡೆಸಿ ಷಡ್ಯಂತ್ರ ನಡೆಸಲು ವಿದೇಶದಿಂದ ಫಂಡಿಂಗ್ ಆಗುತ್ತಿದೆ. ಇದೆಲ್ಲವೂ ಹೊರಗೆ ಬರಬೇಕಾದರೆ ಪ್ರಕರಣವನ್ನು ರಾಜ್ಯ ಸರ್ಕಾರ ಎನ್ ಐಎ ಅಥವಾ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಚಲೋ ನಡೆಸಿರುವ ಬಿಜೆಪಿ ನಾಯಕರು ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಇತಿಶ್ರೀ ಹಾಡಲು ನಾವು ಯಾತ್ರೆ ನಡೆಸುತ್ತಿದ್ದೇವೆ. ಕ್ಷೇತ್ರದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್ ಆಗುತ್ತಿದೆ. ಈ ಬಗ್ಗೆ ಎನ್ ಐಎ ತನಿಖೆ ನಡೆಸಬೇಕು ಎಂದರು.
ಧರ್ಮಸ್ಥಳ ಪ್ರಕರಣದ ಹಿಂದೆ ಇರುವ ದುಷ್ಟ ಶಕ್ತಿಗಳು ಬಹಿರಂಗ ಆಗಬೇಕು. ಹಿಂದೂ ಸಮಾಜವನ್ನು ರಕ್ಷಣೆ ಮಾಡುವಂತಹ ಕೆಲಸ ಆಗಬೇಕು. ಈಗ ಎಸ್ ಐಟಿಯವರು ಬಂಧಿಸಿರುವುದು ಸಣ್ಣಪುಟ್ಟ ವ್ಯಕ್ತಿಗಳನ್ನು. ಇದರ ಹಿಂದೆ ಬಲಾಡ್ಯರು ಇದ್ದಾರೆ. ಅವರನ್ನು ಹೊರಗೆಳೆಯುವ ಕೆಲಸವಾಗಬೇಕು. ಇದಕ್ಕಾಗಿಯೇ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸಲಿ ಎಂದು ಆಗ್ರಹಿಸಿದರು.