ನವದೆಹಲಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಿ ಷಡ್ಯಂತ್ರ ನಡೆಸಲಾಗುತ್ತಿದೆ. ಈ ಬಗ್ಗೆ ಎನ್ ಐಎ ತನಿಖೆ ನಡೆಸಿವಂತೆ ಒತ್ತಾಯಿಸಿ ವಿವಿಧ ಮಠಗಳ ಸ್ವಾಮೀಜಿಗಳ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದೆ.
ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಜಿ, ವಜ್ರದೇಹಿ ಮಠದ ಸ್ವಾಮೀಜಿ ನೇತೃತ್ವದ ವಿವಿಧ ಮಠಗಳ ಸನಾತನ ಸಂತ ಸ್ವಾಮೀಜಿಗಳ ನಿಯೋಗ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದೆ. 8 ಸ್ವಾಮೀಜಿಗಳು ಈ ವೇಳೆ ಉಪಸ್ಥಿತರಿದ್ದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಿ ಷಡ್ಯಂತ್ರ ನಡೆಸಲಾಗುತ್ತಿದೆ. ಈ ಷಡ್ಯಂತ್ರ ಹೊರಬರಬೇಕು, ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸ್ವಾಮೀಜಿಗಳು ಒತ್ತಾಯಿಸಿದರು. ಧರ್ಮಸ್ಥಳ ಪ್ರಕರಣ ಬಾಹುಬಲಿ ಬೆಟ್ಟ ತಲುಪಿರುವುದಕ್ಕೆ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ಮಾತ್ರವಲ್ಲ ಬೇರೆ ಬೇರೆ ಕ್ಷತ್ರಗಳ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಶಬರಿಮಲೆ, ತಿರುಪತಿ ಬಳಿಕ ಈಗ ಧರ್ಮಸ್ಥಳವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಧರ್ಮಸ್ಥಳ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಈ ಬಗ್ಗೆ ಕೇಂದ್ರ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.