ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಮಹತ್ವದ ಹೇಳಿಕೆ ನೀಡಿದ್ದಾರೆ. ರಾಜ್ಯ ಸರ್ಕಾರ ಎಸ್ ಐಟಿ ರಚನೆ ಮಾಡಿರುವುದರಿಂದ ಸತ್ಯ ಹೊರಬರುತ್ತಿದೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಮಾತನಾಡಿದ ಡಾ.ವಿರೇಂದ್ರ ಹೆಗ್ಗಡೆ, ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಎಸ್ ಐಟಿ ರಚನೆ ಮಾಡಿ ತನಿಖೆ ನಡೆಸುತ್ತಿರುವುದರಿಂದ ಸತ್ಯ ಹೊರಬರುತ್ತಿದೆ ಎಂದು ಹೇಳಿದರು.
ಇಷ್ಟು ಹಗೆತನ, ಅಪವಾದ ಯಾಕೆ ಬಂತು ಎಂದು ನಮಗೆ ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ. ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷಗಳ ಕಾಲ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆ ಕಾರಣ. ನಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೀವೆಲ್ಲರೂ ಗಮನಿಸಿದ್ದೀರಿ ಎಂದರು.
ಅನೇಕ ಪುಸ್ತಕಗಳನ್ನು ನಾನು ಓದುತ್ತಿದ್ದೇನೆ. ಸಿದ್ಧಗಂಗಾ ಶ್ರೀಗಳ ಹಲವು ಪುಸ್ತಕಗಳನ್ನು ನಾನು ಓದಿದ್ದೇನೆ. ಸಿದ್ದಗಂಗಾ ಶ್ರೀಗಳು 108 ವರ್ಷಗಳಕಾಲ ಬದುಕಿದವರು ಅವರು ಹೇಳಿದ ಮಾತು. ನಮ್ಮ ಸೇವೆ ಧರ್ಮ ನಮಗೆ ಮುಖ್ಯ ಅಂತ. ನಾವಿಲ್ಲಿ ನಿಮಿತ್ತ ಮಾತ್ರ. ನಮ್ಮ ಸೇವೆ, ಕಾರ್ಯಗಳನ್ನು ನಾವು ಮಾಡಿದ್ದೇವೆ. ಅದನ್ನು ಮುಂದುವರೆಸಿಕೊಂಡು ಹೋಗಿದ್ದು, ಅದಕ್ಕೆ ಸಂಬಂಧಪಟ್ಟ ಇಲಾಖೆಯವರು. ಕೆಲವರು ಪ್ರೀತಿಯಿಂದ ಟೀಕೆ ಮಾಡಿದರೆ. ಆದರೆ ಇವರು ಹಾಗೆ ಟೀಕೆ ಮಾಡಿಲ್ಲ. ನಿಮಗೆ ನಾನು ಎಷ್ಟು ಕೃತಜ್ಞತೆ ಸಲಿಸಿದರೂ ಕಡಿಮೆಯೇ ಎಂದರು.
ಧರ್ಮಸ್ಥಳ ಬೇರೆ, ಧರ್ಮಸ್ಥಳ ಊರಿನವರು ಬೇರೆ ಅಲ್ಲ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆದಿದೆ ನೀವೂ ನೋಡಿದ್ದೀರಿ. ಯಾಕಿಷ್ಟು ದ್ವೇಷ ನನ್ನ ಮೇಲೆ ಇದೆ? ನನಗೆ ಗೊತ್ತಿಲ್ಲ. ಈಗ ಮನಸ್ಸು ಸ್ವಲ್ಪ ಹಗುರವಾಗಿದೆ. ನಮ್ಮ ಮೇಲೆ ದೃಢನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸವಿದೆ. ಎಸ್ ಐಟಿ ವರದಿ ಅರ್ಧ ಬಂದ ಕಾರಣ ನಾನು ಇಷ್ಟು ಧೈರ್ಯದಿಂದ ಮಾತನಾಡುತ್ತಿದ್ದೇನೆ. ನಮ್ಮ ಹೊಳಪು ಹಾಗೇ ಉಳಿದ್ದೆ. ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾನೆ. ನಾವು ಸತ್ಯದಿಂದ ಇದ್ದೇವೆ ಎಂದು ತಿಳಿಸಿದ್ದಾರೆ.