ಶಿವಮೊಗ್ಗ: ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ್ದ ಚಿನ್ನಯ್ಯನ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಇಂದೂ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಎಸ್ಐಟಿಯಿಂದ ಚಿನ್ನಯ್ಯನ ವಿಚಾರಣೆ ನಡೆಸಲಾಗುವುದು.
ಬೆಳ್ತಂಗಡಿ ನ್ಯಾಯಾಲಯದ ಅನುಮತಿ ಪಡೆದು ಚಿನ್ನಯ್ಯನ ವಿಚಾರಣೆ ಕೈಗೊಳ್ಳಲಾಗಿದೆ. ಇನ್ನೂ 10 ಶವಗಳನ್ನು ಹೂತಿಟ್ಟಿರುವುದಾಗಿ ನ್ಯಾಯಾಲಯಕ್ಕೆ ಮಾಸ್ಕ್ ಮ್ಯಾನ್ ಚಿನ್ನಯ್ಯ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಎಸ್ಐಟಿ ಅಧಿಕಾರಿಗಳು ಶುಕ್ರವಾರ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಆಗಮಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ಚಿನ್ನಯ್ಯನನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಇತ್ತೀಚೆಗೆ ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಿನ್ನಯ್ಯ ಧರ್ಮಸ್ಥಳ ಪರಿಸರದಲ್ಲಿ ಇನ್ನೂ 10 ಶವ ಹೂತಿಟ್ಟಿರುವುದಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಎಸ್ಐಟಿ ನಿರ್ಧರಿಸಿದೆ.
ಎಸ್ಐಟಿ ಎಸ್ಪಿ ಜಿತೇಂದ್ರ ಕುಮಾರ್ ನೇತೃತ್ವದ ತಂಡ ಶುಕ್ರವಾರ ಬೆಳಗ್ಗೆ ಶಿವಮೊಗ್ಗ ಸೆಂಟ್ರಲ್ ಜೈಲ್ ಗೆ ಆಗಮಿಸಿ ವಿಚಾರಣೆ ನಡೆಸಿದ್ದು, ಶನಿವಾರ ಕೂಡ ವಿಚಾರಣೆ ಮುಂದುವರೆಯಲಿದೆ. ಚಿನ್ನಯ್ಯನ ಹೇಳಿಕೆ ದಾಖಲಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.