ಹಾಸನ: ಇಂದು ಸುಮಾರು 300 ಸಿಬ್ಬಂದಿಗಳು ಹುಂಡಿ ಗಳನ್ನು ತೆರೆಯುವ ಮತ್ತು ಹಾಸನಾಂಬಾ ದೇವಿಗೆ ಭಕ್ತರು ನೀಡಿದ ಕಾಣಿಕೆಗಳನ್ನು ಎಣಿಸುವ ಕಾರ್ಯದಲ್ಲಿ ಪಾಲ್ಗೊಂಡರು.
ಒಟ್ಟು ಕಾಣಿಕೆ ಮೊತ್ತ ₹3.69 ಕೋಟಿ ಎಂದು ಲೆಕ್ಕಿಸಲಾಯಿತು. ಈ ವರ್ಷದ ಟಿಕೆಟ್ ಆದಾಯ ₹21.92 ಕೋಟಿ ಆಗಿದೆ.
ಅಕ್ಟೋಬರ್ 10ರಿಂದ 22ರವರೆಗೆ ಒಟ್ಟಾರೆ ಕಾಣಿಕೆ ಮತ್ತು ಟಿಕೆಟ್ ಆದಾಯ ಸೇರಿ ₹25.59 ಕೋಟಿ ಆಗಿದೆ.
ಇದರಲ್ಲಿ ಸುಮಾರು ₹8 ರಿಂದ ₹10 ಕೋಟಿ ರೂಪಾಯಿಗಳನ್ನು ಸಾರ್ವಜನಿಕ ವ್ಯವಸ್ಥೆ, ಪ್ರಸಾದ ವಿತರಣೆ, ಲಡ್ಡು ತಯಾರಿ, ವಿದ್ಯುತ್ ಅಲಂಕಾರ, ಹೂ ಅಲಂಕಾರ ಹಾಗೂ ಇತರೆ ಹಬ್ಬದ ಖರ್ಚುಗಳಿಗೆ ಬಳಸಲಾಗುತ್ತದೆ. ಉಳಿದ ಮೊತ್ತವನ್ನು ದೇವಸ್ಥಾನದ ಖಾತೆಯಲ್ಲಿ ಠೇವಣಿಯಾಗಿಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಶ್ರೀ ಹಾಸನಾಂಬ ದೇವಿ ಜಾತ್ರಾ ಮಹೋತ್ಸವವು ಅ.9 ರಿಂದ ಅ.23 ರವರೆಗೆ ನಡೆದಿದ್ದು 25,59,87,327 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಶ್ರೀ ಹಾಸನಾಂಬ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಮಾರುತಿ ಅವರು ತಿಳಿಸಿದ್ದಾರೆ.
1000 ರೂ, 300 ರೂ ಟಿಕೆಟ್ ಹಾಗೂ ಲಾಡುಪ್ರಸಾದ ಮಾರಾಟದಿಂದ ಒಟ್ಟು 21,91,75,052 ರೂ ಆದಾಯ ಬಂದಿದೆ. ಹುಂಡಿ ಎಣಿಕೆಯಲ್ಲಿ 3,68,12,275 ರೂಪಾಯಿ ಬಂದಿದೆ. ಕಾಣಿಕೆ ರೂಪದಲ್ಲಿ 75 ಗ್ರಾಂ. 300 ಮಿಲಿ ಚಿನ್ನ, ಬೆಳ್ಳಿ 1 ಕೆ.ಜಿ 58 ಗ್ರಾಂ. 400 ಮಿಲಿ ಹುಂಡಿಗೆ ಭಕ್ತರು ಹಾಕಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆ ನಡೆದಿದ್ದು, 15,17,785 ರೂ ಆದಾಯ ಸಂಗ್ರಹವಾಗಿದೆ ಎಂದು ಅವರು ತಿಳಿಸಿದ್ದಾರೆ.
