ಹಾಸನ: ಕೆ.ಆರ್.ನಗರದ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ನಾಳೆಗೆ ಪ್ರಕಟಿಸಲಿದೆ. ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ, ನ್ಯಾಯಾಲಯದ ತೀರ್ಪು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಿದೆ ಎಂದು ತಿಳಿಸಿದ್ದಾರೆ.
ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಪೆನ್ ಡ್ರೈವ್ ಹಂಚಿಕೆ ಹಗರಣದಲ್ಲಿ ಬಂಧನಕ್ಕೀಡಾಗಿದ್ದರು. ಪ್ರಜ್ವಲ್ ವಿರುದ್ಧ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವರಾಜೇಗೌಡ, ಈ ತೀರ್ಪಿನಿಂದ ಸಮಾಜಕ್ಕೆ ಒಂದು ಸಂದೇಶ ರವಾನೆಯಾಗಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ. ಹಣ ಬಲ ಇದ್ದರೂ ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ ಎಂಬುದು ಸಾಬೀತಾಗಿದೆ ಎಂದರು.
ಈ ಪ್ರಕರಣದಲ್ಲಿ ಮನೆ ಕೆಲಸದಾಕೆ ಮೇಲೆ ದೌರ್ಜನ್ಯವೆಸಗಲಾಗಿತ್ತು. ಆಕೆಗೆ ನ್ಯಾಯ ಸಿಗಬೇಕು ಎಂದು ನಾವೂ ಕೂಡ ಪ್ರಾರ್ಥಿಸಿದ್ದೆವು. ಪ್ರಜ್ವಲ್ ಪರ ವಕೀಲರು ತಾಂತ್ರಿಕ ವಿಚಾರದಲ್ಲಿ ಎಡವಿದಂತೆ ಕಾಣ್ತಿದೆ. ಈಗ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕ್ತಾರೆ ಎಂದು ಪರಿಗಣಿಸಬೇಕಿಲ್ಲ. ಈ ಹಿಂದೆ ಪ್ರಜ್ವಲ್ ರೇವಣ್ಣನಿಂದ ಹಲವರು ಕಣ್ಣೀರು ಹಾಕಿದ್ದಾರೆ. ಈ ಪ್ರಕರಣದಲ್ಲಿ ಶಿಕ್ಷೆ ಆಗುತ್ತೆ ಎಂಬುದು ಮೊದಲೇ ಗೊತ್ತಿತ್ತು. ಎಸ್ ಐಟಿ ಅಧಿಕಾರಿಗಳು ಸಮರ್ಪಕವಾಗಿ ಸಾಕ್ಷಿ ನೀಡಿದ್ದಾರೆ. ಪ್ರಜ್ವಲ್ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ನಾಳೆ ಕೋರ್ಟ್ ಶಿಕ್ಷೆ ನೀಡಲಿದೆ ಎಂದು ತಿಳಿಸಿದ್ದಾರೆ.