
ಬೆಂಗಳೂರು: ಬೇಸಿಗೆ ಕಾರಣದಿಂದ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾಗದ ಕಾರಣ ಎಸ್ಕಾಂಗಳು ಅನಿಯಮಿತ ವಿದ್ಯುತ್ ಕಡಿತದ ಮೊರೆ ಹೋಗಿವೆ. ಇದರ ಪರಿಣಾಮ ರಾಜ್ಯಾದ್ಯಂತ ವಿದ್ಯುತ್ ಕಣ್ಣಾಮುಚ್ಚಾಲೆ ಶುರು ಆಗಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ವಿದ್ಯುತ್ ಗರಿಷ್ಠ ಬೇಡಿಕೆ 18,350 ಮೆಗಾ ವ್ಯಾಟ್ ಇದ್ದು, ಈ ವರ್ಷದ ಮಾರ್ಚ್ 7 ರಂದು 18,395ರಷ್ಟು ಇದೆ. ಕಳೆದ ವರ್ಷಕ್ಕಿಂತ 2000 ಮೆಗಾ ವ್ಯಾಟ್ ನಷ್ಟು ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇದರ ಪರಿಣಾಮ ಕಳೆದ ಒಂದು ವಾರದಿಂದ ಎಸ್ಕಾಂಗಳು ಅನಿಯಮಿತ ವಿದ್ಯುತ್ ಕಡಿತ ಮಾಡುತ್ತಿವೆ.
ವಿದ್ಯುತ್ ಮಾರ್ಗ ನಿರ್ವಹಣೆ, ಮಳೆ, ಗಾಳಿ, ಇತರೆ ಕಾರಣ ನೀಡಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಧಿಕೃತವಾಗಿ ವಿದ್ಯುತ್ ಕಡಿತ ಬದಲು ಅನಿಯಮಿತ ಕಡಿತ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.