ನವದೆಹಲಿ: ನೈಋತ್ಯ ದೆಹಲಿಯ ಕಪಶೇರಾ ಪ್ರದೇಶದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ರೋಲರ್ ಕೋಸ್ಟರ್ ರೈಡ್‌ನಿಂದ ಬಿದ್ದು 24 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಮೃತರನ್ನು ಪ್ರಿಯಾಂಕ ಎಂದು ಗುರುತಿಸಲಾಗಿದ್ದು, ಗುರುವಾರ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಸವಾರಿಯಿಂದ ಬಿದ್ದರು ಎಂದು ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಮೃತರ ದೇಹದ ಮೇಲೆ ಗಾಯಗಳಾಗಿವೆ. ರಕ್ತಸ್ರಾವವಾಗಿದ್ದು, ಬಲಗಾಲಿನಲ್ಲಿ ಸೀಳಿದ ಗಾಯ, ಎಡಗಾಲು ಬಲ ಮುಂಗೈ ಮತ್ತು ಎಡ ಮೊಣಕಾಲಿನಲ್ಲಿ ಸವೆತ ಗಾಯಗಳು ಸೇರಿದಂತೆ ಗಂಭೀರ ಗಾಯಗಳಾಗಿವೆ. ಪ್ರಿಯಾಂಕಾ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಘಟನೆಯ ಕುರಿತು ಕಪಶೇರಾ ಪೊಲೀಸ್ ಠಾಣೆಗೆ ಮಾಹಿತಿ ಬಂದ ನಂತರ ತನಿಖಾಧಿಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ವರದಿಯನ್ನು ಸಂಗ್ರಹಿಸಿದರು.
ಪ್ರಿಯಾಂಕಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಿಖಿಲ್, ಅವರಿಬ್ಬರೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಮತ್ತು ಫನ್ ಅಂಡ್ ಫುಡ್ ವಿಲೇಜ್‌ಗೆ ಹೋಗಿ ಗುರುವಾರ ಸಂಜೆ 6:15 ರ ಸುಮಾರಿಗೆ ರೋಲರ್ ಕೋಸ್ಟರ್ ರೈಡ್ ಹತ್ತಿದ್ದರು. ಸ್ಟ್ಯಾಂಡ್ ಮುರಿದ ನಂತರ ಪ್ರಿಯಾಂಕಾ ಸವಾರಿಯ ಸಮಯದಲ್ಲಿ ಬಿದ್ದರು ಎಂದು ತಿಳಿಸಿದ್ದಾರೆ.
ಚಾಣಕ್ಯಪುರಿಯ ನಿವಾಸಿ ಪ್ರಿಯಾಂಕಾ, ನೋಯ್ಡಾದ ಸೆಕ್ಟರ್ 3 ರಲ್ಲಿರುವ ಟೆಲಿಕಾಂ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆಕೆಗೆ ಪೋಷಕರು, ಒಬ್ಬ ಸಹೋದರ ಮತ್ತು ಸಹೋದರಿ ಇದ್ದಾರೆ. ತನ್ನ ಸಹೋದರಿ ಫೆಬ್ರವರಿಯಲ್ಲಿ ನಜಾಫ್‌ಗಢದ ನಿಖಿಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೆಬ್ರವರಿ 2026 ರಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು. ಕಪಶೇರಾ ವಾಟರ್ ಪಾರ್ಕ್ ನಲ್ಲಿ ರೋಲರ್ ಕೋಸ್ಟರ್ ಸವಾರಿಗೆ ಸುರಕ್ಷತಾ ಮಾನದಂಡಗಳನ್ನು ಕಾಯ್ದುಕೊಳ್ಳುತ್ತಿಲ್ಲ ಎಂದು ಪ್ರಿಯಾಂಕಾ ಸೋದರ ಮೋಹಿತ್ ಆರೋಪಿಸಿದರು.
ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಘಟನೆ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.