ನವದೆಹಲಿ: ಈಶಾನ್ಯ ದೆಹಲಿಯ ಖಜುರಿ ಖಾಸ್ ಪ್ರದೇಶದಲ್ಲಿ ಗುಟ್ಕಾ ಉಗುಳುವ ವಿವಾರಕ್ಕೆ ಗಲಾಟೆಯಾಗಿ 35 ವರ್ಷದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ.
ಖಜುರಿ ಖಾಸ್ ನಿವಾಸಿ ಅಮೀರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ಬೆನ್ನಿಗೆ ಗುಂಡೇಟು ತಗುಲಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶನಿವಾರ ‘ಗುಟ್ಕಾ’ ಬಳಸುವ ಬಗ್ಗೆ ನೆರೆಹೊರೆಯವರ ನಡುವೆ ನಡೆದ ಜಗಳದಿಂದ ವಿವಾದ ಭುಗಿಲೆದ್ದಿತು. ಎರಡೂ ಕಡೆಯವರ ನಡುವೆ ಯಾವುದೇ ದ್ವೇಷವಿರಲಿಲ್ಲ. ವಾಗ್ವಾದ ತಾರಕಕ್ಕೇರಿದಾಗ ಒಬ್ಬಾತ ಮನೆಯಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಿದಾಗ ಆಮಿರ್ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಮಾಹಿತಿ ತಿಳಿದ ಪೊಲೀಸ್ ತಂಡವು ಸ್ಥಳಕ್ಕೆ ಹೋಗಿ ತನಿಖೆ ನಡೆಸಿದೆ. ಅಮನ್(20), ಇರ್ಫಾನ್(40), ಮತ್ತು ರೆಹಾನ್(18) ಅವರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬನಾದ ಅಮನ್ ನನ್ನು ಬಂಧಿಸಿದ್ದು, ಉಳಿದ ಆರೋಪಿಗಳನ್ನು ಬಂಧಿಸಲು ಮತ್ತು ಅಪರಾಧದಲ್ಲಿ ಬಳಸಲಾದ ಬಂದೂಕನ್ನು ವಶಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.