ಬೆಂಗಳೂರು : ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರಕ್ಕೆ ಇಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಂತಿಮ ನಮನ ಸಲ್ಲಿಸಿದರು .
ನಂತರ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮವಿಭೂಷಣ, ಸಾಹಿತ್ಯಲೋಕದ ಮೇರು ಪರ್ವ ದಿವಂಗತ ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರಕ್ಕೆ ಇಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು. ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದರು.
1984 ಕನಕಪುರದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿದ್ದೆವು. ಆಗ ನಾವು ಎಸ್.ಎಲ್.ಭೈರಪ್ಪನವರನ್ನು ಬನಶಂಕರಿಯಿಂದ ಮೆರವಣಿಗೆಯಲ್ಲಿ ಕರೆದುಕೊಂಡು ಬಂದಿದ್ದೆವು. ಅವರು ದಿಟ್ಟ, ನೇರ ನುಡಿಯ ವ್ಯಕ್ತಿತ್ವದವರಾಗಿದ್ದರು ಮತ್ತು ಬರವಣಿಗೆಯಲ್ಲಾಗಲಿ, ಮಾತಿನಲ್ಲಾಗಲಿ ನಿರ್ಭೀತರಾಗಿದ್ದರು. ಅವರ ಕಾದಂಬರಿಗಳು ಕೇವಲ ಕನ್ನಡ ಸಾಹಿತ್ಯಕ್ಕೆ ಸೀಮಿತವಾಗದೆ, ಅನೇಕ ಭಾಷೆಗಳಿಗೆ ಅನುವಾದಗೊಂಡು ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿವೆ.
ಭೈರಪ್ಪನವರು ತಮ್ಮ ಬರವಣಿಗೆಯಲ್ಲಿ ನಮ್ಮ ಸಂಸ್ಕೃತಿಯನ್ನು ಬಹಳವಾಗಿ ಎತ್ತಿ ಹಿಡಿದಿದ್ದಾರೆ. ಅವರಿಗೆ ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಬಹಳಷ್ಟು ಪ್ರಶಸ್ತಿಗಳು ದೊರೆತಿವೆ. ದೇಶದ ಅನೇಕ ಗಣ್ಯರು ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅವರ ಸಿದ್ಧಾಂತ, ನಿಲುವು ಮತ್ತು ನಡೆ ನಮ್ಮ ಸಾಹಿತ್ಯ ಲೋಕಕ್ಕೆ ಹಾಗೂ ಸಮಾಜದ ಎಲ್ಲ ವರ್ಗಕ್ಕೂ ಒಂದು ಮಾರ್ಗದರ್ಶನವಾಗಿದೆ.
ಇಂದು ನಾನು ನಮ್ಮೆಲ್ಲ ಕನ್ನಡ ಮಾಧ್ಯಮದವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಏಕೆಂದರೆ, ಒಬ್ಬ ಪ್ರಧಾನಿ ಅಥವಾ ರಾಷ್ಟ್ರಪತಿಗೆ ಯಾವ ರೀತಿ ಗೌರವ ಸಲ್ಲಿಸಲಾಗುತ್ತದೆಯೋ, ಅದೇ ರೀತಿ ನೀವು ನಮ್ಮ ಕನ್ನಡ ಭಾಷೆಯ ಒಬ್ಬ ದಿಗ್ಗಜರಿಗೆ ಗೌರವ ಸಲ್ಲಿಸಿದ್ದೀರಿ. ಅವರ ಸ್ಮಾರಕದ ವಿಚಾರವಾಗಿ ನಾನು ಮುಖ್ಯಮಂತ್ರಿಗಳ ಜೊತೆ ಹಾಗೂ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸುತ್ತೇವೆ. ಮೈಸೂರಿನಲ್ಲಿ ಎಲ್ಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗುತ್ತದೆ. ಸರ್ಕಾರದ ಪರವಾಗಿ, ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ನಮ್ಮೆಲ್ಲರ ಪರವಾಗಿ ಭೈರಪ್ಪನವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದರು.
ಸರಸ್ವತಿ ಪುತ್ರನಿಗೆ ಅಂತಿಮ ನಮನ
— DK Shivakumar (@DKShivakumar) September 25, 2025
ಸರಸ್ವತಿ ಸಮ್ಮಾನ್ ಪುರಸ್ಕೃತ, ಪದ್ಮವಿಭೂಷಣ, ಸಾಹಿತ್ಯಲೋಕದ ಮೇರು ಪರ್ವ ದಿವಂಗತ ಎಸ್.ಎಲ್. ಭೈರಪ್ಪನವರ ಪಾರ್ಥಿವ ಶರೀರಕ್ಕೆ ಇಂದು ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ಗೌರವ ಸಲ್ಲಿಸಲಾಯಿತು. ಭೈರಪ್ಪನವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ… pic.twitter.com/ULpjFgqfoz