ದಾವಣಗೆರೆ: ಉತ್ತರ ಪ್ರದೇಶದಲ್ಲಿ ಆರಂಭವಾಗಿದ್ದ ಐ ಲವ್ ಮೊಹಮ್ಮದ್ ಫ್ಲೆಕ್ಸ್ ಸಂಘರ್ಷ ಕರ್ನಾಟಕಕ್ಕೂನ್ ಕಾಲಿಟ್ಟಿದ್ದು, ದಾವಣಗೆರೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಐ ಲವ್ ಮೊಹಮ್ಮದ್ ಫ್ಲೆಕ್ಸ್ ಕಟ್ಟುವ ವಿಚಾರವಾಗಿ ಸೆ. 24ರಂದು ರಾತ್ರಿ ದಾವಣಗೆರೆ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಗಲಾಟೆ ನಡೆದಿತ್ತು. ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿತ್ತು. ಆಜಾದ್ ನಗರ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿತ್ತು.
ಪೊಲೀಸರ ನಾಲ್ಕು ಪ್ರತ್ಯೇಕ ತಂಡಗಳಿಂದ ಈವರೆಗೆ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಎರಡು ಕೋಮಿನ ಮುಖಂಡರು, ನಾಗರಿಕರು ಪೊಲೀಸರ ಜೊತೆ ಸಹಕರಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡಬಾರದು. ಹಾಗೇನಾದರೂ ಕಂಡುಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.