ದಾವಣಗೆರೆ: ಕೂದಲು ಕಸಿ ಮಾಡುವ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು 11 ನಕಲಿ ಕ್ಲಿನಿಕ್ ಗಳಿಗೆ ಬೀಗ ಜಡಿದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ 15 ಕೂದಲು ಕಸಿ ಮಾಡುವ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 4 ಕ್ಲಿನಿಕ್ ಗಳು ಮಾತ್ರ ಅಧಿಕೃತವಾಗಿ ಪರವಾನಿಗಿ ಪಡೆದಿರುವುದು ಬೆಳಕಿಗೆ ಬಂದಿದೆ. ಉಳಿದ 11 ಕ್ಲಿನಿಕ್ ಗಳು ಲೈಸೆನ್ಸ್ ಪಡೆದಿರಲಿಲ್ಲ. ಅಲ್ಲದೇ ಯಾವುದೇ ವೈದ್ಯರೂ ಇರಲಿಲ್ಲ ಈ ಹಿನ್ನೆಲೆಯಲ್ಲಿ 11 ನಕಲಿ ಕ್ಲಿನಿಕ್ ಗಳನ್ನು ಸೀಜ್ ಮಾಡಲಾಗಿದೆ ಎಂದು ಡಿಹೆಚ್ ಒ ಷಣ್ಮುಖಪ್ಪ ತಿಳಿಸಿದ್ದಾರೆ.
ನಿಯಮದ ಪ್ರಕಾರ ಪರಿಣತ ವೈದ್ಯರು ಕೂದಲು ಕಸಿ ಮಾಡಬೇಕು. ಆದರೆ ಇಲ್ಲಿ ಸಹಾಯಕರು ಕೂದಲು ಕಸಿ ಚಿಕಿತ್ಸೆ ಮಾಡುತ್ತಿದ್ದರು. ಡಿಸಿ ಸೂಚನೆ ಮೇರೆಗೆ 11 ಕ್ಲಿನಿಕ್ ಗಳನ್ನು ಬಂದ್ ಮಾಡಿಸಲಾಗಿದೆ ಎಂದು ತಿಳಿಸಿದರು.