ಅಗರ್ತಲಾ: ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವಿಗೆ ವಿಷವುಣಿಸಿ ತಂದೆಯೇ ಹತ್ಯೆಗೈರುವ ಘಟನ್ರ್ ತ್ರಿಪುರಾದ ಖೋವಾಯಿ ಜಿಲ್ಲೆಯ ಅಹೆಡಬಾರಿ ಗ್ರಾಮದಲ್ಲಿ ನಡೆದಿದೆ.
ತ್ರಿಪುರಾ ರಾಜ್ಯ ರೈಫಲ್ಸ್ ಸಿಬ್ಬಂದಿಯಾಗಿರುವ ತಂದೆಯೇ ಈ ಕೃತ್ಯವೆಸಗಿದ್ದಾನೆ. ಹೆಣ್ಣು ಮಗು ಎಂಬ ಕಾರಣಕ್ಕೆ ಮಗುವಿಗೆ ವಿಷಹಾಕಿದ್ದು, ಮಗು ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಮಗುವನ್ನು ಖೋವಾಯಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅಗರ್ತಲಾ ಜಿಬಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು.
ಮಗುವಿನ ತಂದೆ ಎಡಿಸಿ ಖುಮುಲ್ವಾಂಗ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 10ನೇ ಬೆಟಾಲಿಯನ್ ಟಿಎಸ್ ಆರ್ ರಾಥೀಂದ್ರಾ ಡೆಬ್ಬರ್ಮಾನನ್ನು ಬಂಧಿಸಲಾಗಿದ್ದು, ಮೂರು ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.
ಮಗುವಿನ ತಾಯಿ ಮಿಥಾಲಿ ಡೆಬ್ಬರ್ಮಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ತನ್ನ ಪತಿ ಮಗಳಿಗೆ ವಿಷ ನೀಡಿದ್ದಾರೆ. ಅವರು ಗಂಡು ಮಗು ಬೇಕೆಂದು ಆಸೆ ವ್ಯಕ್ತಪಡಿಸಿದ್ದರು. ಆದರೆ ಎರಡನೇ ಮಗು ಕೂಡ ಹೆಣ್ಣು ಎಂದು ಜಗಳವಾಡಿದ್ದರು. ಇದೇ ಕಾರಣಕ್ಕೆ ನನಗೆ ಹಿಂಸೆ ನೀಡುತ್ತಿದ್ದರು. ಮಗಳಿಗೆ ಬಿಸ್ಕೆಟ್ ಕೊಡಿಸುವ ನೆಪದಲ್ಲಿ ಅಂಗಡಿಗೆ ಕರೆದೊಯ್ದಿದ್ದರು. ಮನೆಗೆ ಬಂದಾಗ ಮಗು ವಾಂತಿ ಮಾಡಿಕೊಳ್ಳುತ್ತಿತ್ತು. ಬಾಯಲ್ಲಿ ಔಷಧಿ ವಾಸನೆ ಬರುತ್ತಿತ್ತು. ಪತಿಯನ್ನು ವಿಚಾರಿಸಿದಾಗ ವಿಷಕೊಟ್ತಿರುವುದು ಗೊತ್ತಾಗಿದೆ. ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ದೂರು ನೀಡಿದ್ದರು.