ಬೆಂಗಳೂರು: ರೇನುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್, ಕ್ವಾರಂಟೈನ್ ಸೆಲ್ ನಲ್ಲಿ ವಿವಿಧ ಸವಲತ್ತು ನೀಡುವಂತೆ ಕೋರ್ಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಕ್ತಾಯಗೊಂಡಿದ್ದು, ಆದೇಶವನ್ನು ಕಾಯ್ದಿರಿಸಲಾಗಿದೆ.
ಜೈಲಿನಲ್ಲಿ ಹೆಚ್ಚುವರಿ ಹಾಸಿಗೆ, ತಲೆದಿಂಬು ಸೇರಿದಂತೆ ಇತರ ಅಗತ್ಯ ಸವಲತ್ತು ನೀಡುವಂತೆ ಕೋರ್ಟ್ ಆದೇಶ ನೀಡಿದ್ದರೂ ಜೈಲಧಿಕಾರಿಗಳು ಸವಲತ್ತು ನೀಡಿಲ್ಲ ಎಂದು ದರ್ಶನ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಈ ಬಗ್ಗೆ ಖುದ್ದು ಪರಿಶೀಲನೆ ನಡೆಸುವಂತೆ ಕೋರೊದ್ದರು. ಅರ್ಜಿ ವಿಚಾರಣೆ ನಡೆಸಿದ್ದ 59ನೇ ಸಿಸಿಹೆಚ್ ನ್ಯಾಯಾಲಯ, ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕಾನೂನು ಪ್ರಾಧಿಕಾರಗಳ ಸದಸ್ಯರಿಗೆ ಸೂಚನೆ ನೀಡಿತ್ತು. ಅದರಂತೆ ಕಾನೂನು ಪ್ರಾಧಿಕಾರ ಜೈಲಿಗೆ ಭೇಟಿ ನೀಡಿ ದರ್ಶನ್ ಗೆ ನೀಡಿದ್ದ ಸವಲತ್ತಿನ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಿತ್ತು.
ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ದರ್ಶನ್ ಹಾಗೂ ಸರ್ಕಾರದ ಪರವಕೀಲರಿಬ್ಬರ ವಾದ-ಪ್ರತಿವಾದವನ್ನು ಆಲಿಸಿತು. ವಿಚಾರಣೆ ಮುಕ್ತಾಯಗೊಂಡಿದ್ದು, ಆದೇಶವನ್ನು ಅಕ್ಟೋಬರ್ 29ಕ್ಕೆ ಕಾಯ್ದಿರಿಸಿದೆ.
