ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ದೇವರ ವಿಗ್ರಹ ವಿರೂಪಗೊಳಿಸಿದ್ದ ಆರೋಪಿಯನ್ನು ಆನವಟ್ಟಿ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗೊಂದಿ ಗ್ರಾಮದ ಕೋಟೇಶ್ವರ(32) ಬಂಧಿತ ಆರೋಪಿ. ಕುಬಟೂರು ಗ್ರಾಮದ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿರುವ ನರಸಿಂಹ ಸ್ವಾಮಿ ಮೂರ್ತಿಯನ್ನು ಕೋಟೇಶ್ವರ ವಿರೂಪಗೊಳಿಸಿದ್ದ. ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರು ದೇವರ ದರ್ಶನಕ್ಕೆ ಹೋದಾಗ ದೇವಾಲಯದ ಬಾಗಿಲು ತೆರೆದಿರುವುದು ಕಂಡುಬಂದಿದ್ದು, ನಿಧಿಗಾಗಿ ಕಳ್ಳರು ಬಂದಿರಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ದೇವಸ್ಥಾನಕ್ಕೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ವೀಕ್ಷಿಸಿದಾಗ ಯುವಕನೊಬ್ಬ ದೇಗುಲ ಪ್ರವೇಶಿಸಿರುವುದು ಗೊತ್ತಾಗಿದೆ. ನಂತರ ಪೊಲೀಸ್ರು ಕಾರ್ಯಾಚರಣೆ ನಡೆಸಿ ಆರೋಪಿ ಕೋಟೇಶ್ವರನನ್ನು ಬಂಧಿಸಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ದೇವರು ಕನಸಲ್ಲಿ ಬಂದು ಬಾಯಲ್ಲಿ ಸಿಮೆಂಟ್ ಇದೆ ಎಂದು ಹೇಳಿದ್ದರಿಂದ ಅದನ್ನು ತೆಗೆದಿದ್ದೇನೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಈ ಹಿಂದೆಯೂ ತನ್ನ ಗ್ರಾಮದಲ್ಲಿ ದೇವರ ವಿಗ್ರಹಗಳನ್ನು ನದಿಗೆ ಎಸೆದಿದ್ದಾನೆ ಎನ್ನಲಾಗಿದೆ.