ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಣಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಂಗಳೂರಿನ ಜಪ್ಪಿನಮೊಗರು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನರ ಜೀವನ ಅಲ್ಲೋಲಕಲ್ಲೋಲವಾಗಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಜಪ್ಪಿನಮೊಗರು ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಇಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಅವಾಂತರಗಳು ಸೃಷ್ಟಿಯಾಗಿವೆ.
ಹಲವು ಮನೆಗಳ ಒಳಭಾಗದಲ್ಲಿ ಎದೆಯಮಟ್ಟಕ್ಕೆ ನೀರು ನಿಂತಿದ್ದು, ಮನೆಯಲ್ಲಿದ್ದ ಸೋಫಾ, ಡೈನಿಂಗ್ ಟೇಬಲ್, ದೇವರ ಮನೆ, ಟೀವಿ, ಫ್ರಿಡ್ಜ್ ಸೇರಿದಂತೆ ಪೀಠೋಪಕರಣಗಳು ನೀರಿನಲ್ಲಿ ತೇಲುತ್ತಿವೆ.
ಅಡುಗೆ ಸಾಮಗ್ರಿಗಳು ನೀರುಪಾಲಾಗಿದ್ದು, ಅನ್ನ-ಆಹಾರ, ಕುಡಿಯುವ ನೀರು ಇಲ್ಲದೇ ಕುಟುಂಬಗಳು ಪರದಾಡುತ್ತಿವೆ. ಹಲವರು ಮನೆಯ ಟೆರೇಸ್ ಗಳ ಮೇಲೆ ಆಶ್ರಯಪಡೆದಿದ್ದು, ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನಿದಿರುವ ಹಾವಾಮನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
