ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಯವರು, ನಾನು ಸೇರಿದಂತೆ ಅನೇಕರನ್ನು ಟೀಕೆ ಮಾಡುತ್ತಿರುವವರ ಹೆಸರುಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಅವರನ್ನು ದೊಡ್ಡ ನಾಯಕರಂತೆ ಬಿಂಬಿಸುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ನನ್ನ ಹಕ್ಕಿಗೆ ಚ್ಯುತಿ ತರುತ್ತಿದ್ದಾರೆ. ಹೀಗಾಗಿ ನಾನು ಹಕ್ಕುಚ್ಯುತಿ ನಿರ್ಣಯ ಮಂಡಿಸುತ್ತೇನೆ ಎಂದರು. ಈ ವೇಳೆ ವಿರೋಧ ಪಕ್ಷಗಳ ಶಾಸಕರು, ಕೆಲವರು ಮುಖ್ಯಮಂತ್ರಿಗಳನ್ನು ಕೊಲೆಗಡುಕ ಎಂದು ಹೇಳಿದ್ದರೂ ಸರ್ಕಾರ ಸುಮ್ಮನೆ ಕೂತಿದೆ ಎಂದು ಧ್ವನಿಗೂಡಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ ಶಿವಕುಮಾರ್ ಅವರು, ಯಾರು ಯಾವ ಯಾವ ಹೇಳಿಕೆ ನೀಡಿದ್ದಾರೆ ಎಂದು ನಾನು ನೋಡಿದ್ದೇನೆ. ಮುಖ್ಯಮಂತ್ರಿಯವರನ್ನು ಕೊಲೆಗಡುಕ ಎಂದು ಹೇಳಿರುವುದನ್ನೂ ನೋಡಿದ್ದೇನೆ. ನನ್ನ ಬಗ್ಗೆಯೂ ಮಾತನಾಡಿದ್ದಾರೆ. ನಿಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಗ್ಗೆ ಕೂಡ ಇಂದು ಬೆಳಗ್ಗೆ ಮಾತನಾಡಿದ್ದೂ, ಅದು ಕೂಡ ನನ್ನ ಮೊಬೈಲ್ ನಲ್ಲಿದೆ. ಈ ರೀತಿ ಹೇಳಿಕೆಗಳನ್ನು ನೀಡುತ್ತಿರುವವರ ಹೆಸರನ್ನು ವಿಧಾನಸಭೆಯಲ್ಲಿ ಹೇಳಿ ಅವರನ್ನು ನಾಯಕರನ್ನಾಗಿ ಮಾಡುವುದು ಬೇಡ. ಈ ವಿಚಾರವಾಗಿ ಗೃಹ ಸಚಿವರು ಹೇಳುವುದನ್ನು ಕೇಳೋಣ ಎಂದರು.