ಬೆಂಗಳೂರು: ಬೆಂಗಳೂರಿನಲ್ಲಿ ಸುರಂಗ ರಸ್ತೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿರುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ತೇಜಸ್ವಿ ಸೂರ್ಯ ಖಾಲಿ ಟ್ರಂಕ್, ಸುರಂಗ ರಸ್ತೆ ಬೇಡವೆಂದರೆ ಸಂಚಾರದಟ್ಟಣೆ ನಿಯಂತ್ರಣಕ್ಕೆ ಅವರ ಬಳಿ ಇರುವ ಕಾರ್ಯಯೋಜನೆ ಏನು? ಎಂದು ಹೇಳಲಿ ಎಂದರು.
ಯಾರೇನಾದರೂ ವಿರೋಧ ಮಾಡಿಕೊಳ್ಳಲಿ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದಾರೆ. ಸರ್ಕಾರ ಉತ್ತಮ ಕೆಲಸ ಮಾಡಿ ಹೆಸರು ಮಾಡಬಾರದು ಎಂಬುದು ಅವರ ಉದ್ದೇಶ. ನಾನು ಈ ಯೋಜನೆಗೆ ಯಾವುದೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಒಂದು ಸಣ್ಣ ಭಾಗದಲ್ಲಿ ಈ ರಸ್ತೆ ಹಾದುಹೋಗುತ್ತದೆ. ಇದನ್ನು ಪರಿಶೀಲನೆ ಮಾಡುತ್ತೇನೆ. ಸಮಸ್ಯೆ ಇದ್ದರೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಲಾಲ್ ಬಾಗ್ ಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ ಎಂದರು.
ಲಾಲ್ ಬಾಗ್ ನ ಸ್ವಲ್ಪ ಜಾಗವನ್ನು ಈ ಯೋಜನೆ ಕಾಮಗಾರಿ ನಡೆಯುವವರೆಗೂ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ ಮತ್ತೆ ಲಾಲ್ ಬಾಗ್ ಉದ್ಯಾನಕ್ಕೆ ಹಿಂತಿರುಗಿಸುತ್ತೇವೆ ಎಂದು ಸ್ಪಷ್ಟಡಿಸಿದರು.
ಸಾವಿರಾರು ಇತಿಹಾಸವಿರುವ ಜಾಗ ಎಂಬ ತೇಜಸ್ವಿ ಸೂರ್ಯ ಹೇಳಿಕೆಗೆ, ಸುರಂಗ ರಸ್ತೆಯನ್ನು ಭೂಮಿಯ ಒಳಗೆ ಕೊರೆಯಲಾಗುವುದು. ಹೊರಗೆ ಮಾಡಲು ಆಗುವುದಿಲ್ಲ. ಅವರ ಮಾತು ಕೇಳಿಕೊಂಡು ಯೋಜನೆ ನಿಲ್ಲಿಸಲು ಆಗುವುದಿಲ್ಲ. ಹಾಗಿದ್ದರೆ ಮುಂಬೈ ನಲ್ಲಿ ಯಾಕೆ ಭೂಮಿ ಕೊರೆದು ಸುರಂಗ ರಸ್ತೆ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಯಾಕೆ ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ನಾನು ಆತನ ಮಾತಿಗೆ ಬಾಗುವುದಿಲ್ಲ. ಹೋರಾಟ ಮಾಡುವವರು ಮಾಡುತ್ತಾರೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಾವು ಜನರಿಗಾಗಿ ಕೆಲಸ ಮಾಡುತ್ತಿದ್ದೇವೆ. ಅವರ ಕಾಲದಲ್ಲಿ ಬೆಂಗಳೂರಿಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡಲು ಆಗಲಿಲ್ಲ. ತೇಜಸ್ವಿ ಸೂರ್ಯ ಎಂದರೆ ಖಾಲಿ ಟ್ರಂಕ್ ಎಂದು ಕಿಡಿಕಾರಿದರು.
ಟೋಲ್ ಕಟ್ಟಿ ಹೋಗುವವರಿಗೆ ಈ ರಸ್ತೆ ಮಾಡಲಾಗುತ್ತಿದೆ. ಈ ಯೋಜನೆ ಬೇಡವಾದರೆ ಅವರು ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಒಂದು ಕಾರ್ಯ ಯೋಜನೆಯನ್ನು ನೀಡಲಿ. ಬೆಂಗಳೂರಿನ ಸಂಸದರಾಗಿ ಪ್ರಧಾನಮಂತ್ರಿ ಬಳಿ ಒಂದು ದಿನವೂ ಈ ನಗರದ ಅಭಿವೃದ್ಧಿಗೆ 10 ರೂಪಾಯಿ ವಿಶೇಷ ಅನುದಾನ ಕೊಡಿಸಿಲ್ಲ. ಅವರ ಸರ್ಕಾರವಿದ್ದಾಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳೇನು? ಅವರು ಸಮಸ್ಯೆ ಬಗೆಹರಿಸಲಿಲ್ಲ ಯಾಕೆ? ಕಾಲದಲ್ಲಿ ಕಸದ ಟೆಂಡರ್ ಕರೆಯಲು ಸಾಧ್ಯವಾಗಲಿಲ್ಲ ಯಾಕೆ? ರಸ್ತೆ ಅಗಲೀಕರಣ, ಫ್ಲೈಓವರ್ ಮಾಡಲಿಲ್ಲ ಯಾಕೆ? ಅವರು ಬೆಂಗಳೂರಿಗಾಗಿ ಏನೂ ಮಾಡಲಿಲ್ಲ. ಬೆಂಗಳೂರಿನ ಬೀದಿಗಳಲ್ಲಿ ಕೇಬಲ್ ವೈಯರ್ ಗಳು ನೇತಾಡುತ್ತಿರುವುದನ್ನು ನೋಡುತ್ತಿದ್ದೀರಲ್ಲವೇ? ಅವುಗಳನ್ನು ಯಾಕೆ ತೆರವುಗೊಳಿಸಲಿಲ್ಲ. ಮಾಫಿಯಾ ಜೊತೆ ಕೈಜೋಡಿಸಿ, ಬೆಂಗಳೂರನ್ನು ಹದಗೆಡಿಸಿದ್ದಾರೆ. ಈ ಕಾರಣಕ್ಕೆ ಜನ ನಮ್ಮ ಪಕ್ಷಕ್ಕೆ ಬೆಂಬಲಿಸಿ 140 ಶಾಸಕರನ್ನು ಆಯ್ಕೆ ಮಾಡಿ ಅಧಿಕಾರದಲ್ಲಿ ಕೂರಿಸಿದ್ದಾರೆ. ನಾವು ನಮ್ಮ ಕೆಲಸವನ್ನು ಮಾಡೇ ಮಾಡುತ್ತೇವೆ. ಅದಕ್ಕೆ ಬದ್ಧರಾಗಿದ್ದೇವೆ. ಬೆಂಗಳೂರು ಜಾಗತಿಕ ನಗರ. ಇದನ್ನು ಕಾಪಾಡಲು ಏನು ಮಾಡಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದರು.
