ಬೆಂಗಳೂರು: ಕೆಂಪೇಗೌಡ ಬಡಾವಣೆಯಲ್ಲಿ ಯಾವ ಅಧಿಕಾರಿ ಹಣ ಪಡೆದಿದ್ದಾನೆ ಹೇಳಿ, ಹೊತ್ತು ಮುಳುಗುವುದರಲ್ಲಿ ಅವರನ್ನು ಅಮಾನತು ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎನ್. ಜವರಾಯಿ ಗೌಡರು, ಕೆಂಪೇಗೌಡ ಬಡಾವಣೆ ವಿಚಾರವಾಗಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ಜವರೇಗೌಡರು ಅನೇಕ ಆರೋಪ ಮಾಡಿದ್ದಾರೆ. ಇಂತಹ ಪ್ರಕರಣ ನಡೆಯುತ್ತಿದ್ದರೆ, ಯಾರು, ಯಾರಿಗೆ ಹಣ ನೀಡಿದ್ದಾರೆ ಎಂದು ರೈತರಿಂದ ದೂರು ಬರೆಸಿ ಕೊಡಿ. ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಹಣ ಪಡೆದಿರುವ ಅಧಿಕಾರಿಯನ್ನು ಅಮಾನತು ಮಾಡುತ್ತೇನೆ. ಆಮೇಲೆ ತನಿಖೆ ನಡೆಸಲಾಗುವುದು ಎಂದರು.
ಭೂಮಿ ಕಳೆದುಕೊಂಡ ರೈತನ ಕಷ್ಟ ಏನು ಎಂಬ ಅರಿವು ನಮಗಿದೆ. ಅವರಿಗೆ ಸಿಗುತ್ತಿರುವುದು 9,600 ಅಡಿಗಳು ಮಾತ್ರ. ಅಭಿವೃದ್ಧಿ ಆದ ನಂತರ ಆತನಿಗೆ ಸ್ವಲ್ಪ ಹಣ ಸಿಗಬಹುದು. 2013 ರಲ್ಲಿ ಯುಪಿಎ ಸರ್ಕಾರ ತೆಗೆದುಕೊಂಡ ದಿಟ್ಟ ತೀರ್ಮಾನದ ನಂತರ ಎರಡು, ಮೂರು ಹಾಗೂ ನಾಲ್ಕು ಪಟ್ಟು ಹಣ ನೀಡುವ ತೀರ್ಮಾನವಾಗಿದೆ. ನಾವು 60:40 ಅನುಪಾತದಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಭೂಸ್ವಾಧೀನ ಪ್ರಕ್ರಿಯೆಯಿಂದ ಕೆಲವು ಭೂಮಿಯನ್ನು ಬಿಡಲಾಗಿದೆ ಎಂಬ ಅಂಶವನ್ನು ಸದಸ್ಯರು ಹೇಳಿದ್ದು, ಕಾನೂನು ಬಾಹಿರವಾಗಿ ಬಿಟ್ಟಿದ್ದರೆ ಅದನ್ನು ತನಿಖೆ ಮಾಡಲು ಸಿದ್ಧವಿದ್ದೇವೆ. ಅಧಿಸೂಚನೆ ಹೊರಡಿಸಿದ ನಂತರ ಮಾರ್ಗಸೂಚಿಯಂತೆ ಎಲ್ಲವನ್ನೂ ನಡೆಸಬೇಕು. ತಮಗೆ ಬೇಕಾದವರ ಜಮೀನು ಕೈಬಿಡಲು ಸಾಧ್ಯವಿಲ್ಲ. ಆ ಭಾಗದ ಜನಪ್ರತಿನಿಧಿಯಾಗಿ ನೀವು ನಮಗೆ ಪ್ರಸ್ತಾವನೆ ನೀಡಿ. ನಾನು ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.