ಬೆಂಗಳೂರು: ಬೆಲೆ ಏರಿಕೆ ಪ್ರಾರಂಭ ಮಾಡಿದವರೇ ಬಿಜೆಪಿಯವರು. ರೈತರಿಗೆ ನೆರವಾಗಲು ನಾವು ಹಾಲಿನ ದರ ಏರಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಬೆಲೆ ಏರಿಕೆ ವಿರುದ್ದ ಬಿಜೆಪಿ ಹೋರಾಟ ವಿಚಾರವಾಗಿ, “ನಾವೇನು ಈಗ ಬೆಲೆ ಏರಿಕೆ ಮಾಡಿಲ್ಲ. ಅವರು ಬೆಲೆ ಏರಿಕೆ ಮಾಡಿದ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು. ರೈತರಿಗೆ ಸಹಾಯವಾಗಲು ಹಾಲಿನ ಬೆಲೆ ಏರಿಕೆ ಮಾಡಲಾಗಿದೆ ಎಂದರು.
ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗಿಂತ ನಮ್ಮಲ್ಲಿ ಹಾಲಿನ ದರ ಕಡಿಮೆಯಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕಡಿಮೆ ಎಂದು ತಿಳಿಸಿದರು.
ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5,300 ಕೋಟಿ ಅನುದಾನ ಬಿಡುಗಡೆ ವಿಚಾರವನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಇಡಲಾಗಿದೆ ಎಂದು ಕೇಂದ್ರ ಜಲಶಕ್ತಿ ಸಚಿವರು ತಿಳಿಸಿದ್ದಾರೆ.ನಾವು ಭದ್ರಾ ಯೋಜನೆಗೆ ಎಷ್ಟು ಖರ್ಚು ಮಾಡಿದ್ದೇವೆ, ಕೇಂದ್ರ ಎಷ್ಟು ಕೊಡಬೇಕು ಎಂಬುದನ್ನೂ ತಿಳಿಸಿದ್ದೇವೆ. ದೆಹಲಿ ಭೇಟಿ ವೇಳೆ ಕೇಂದ್ರ ಜಲಶಕ್ತಿ ಸಚಿವರನ್ನು ನಾನು ಹಾಗೂ ಮುಖ್ಯಮಂತ್ರಿಯವರು ಭೇಟಿ ಮಾಡಿ ರಾಜ್ಯದ ನೀರಾವರಿ ಸಂಬಂಧಿತ ವಿಚಾರಗಳನ್ನು ಚರ್ಚೆ ಮಾಡಿದೆವು. ಮಹದಾಯಿ, ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ವಿಚಾರಗಳನ್ನು ಮನವರಿಕೆ ಮಾಡಿದ್ದೇವೆ. ನಮ್ಮ ಸಮಸ್ಯೆಗಳು ಅವರಿಗೆ ಅರ್ಥವಾಗಿದೆ. ಈ ವಿಚಾರವಾಗಿ ಒಬ್ಬೊಬ್ಬರನ್ನೇ ಕರೆಸಿ ಮಾತುಕಥೆ ನಡೆಸುವುದಾಗಿ ತಿಳಿಸಿದ್ದಾರೆ ಎಂದರು.
ಎತ್ತಿನಹೊಳೆಗೆ ಅನುಮತಿ ನೀಡಲೇಬೇಕು. ಇದರಲ್ಲಿ ಕೊಡಿಸುವುದೇನಿದೆ? ಇದು ಅವರ ಕರ್ತವ್ಯ. ಸ್ವಾಧೀನ ಪಡಿಸಿಕೊಂಡ ಭೂಮಿಗೆ ಬದಲಿ ಭೂಮಿ ನೀಡಿದ್ಧೇವೆ ಎಂದು ತಿಳಿಸಿದರು.